ಹಾವೇರಿ: ದೇಶದ ಬೆನ್ನೆಲುಬು ರೈತ, ರೈತನ ಬೆನ್ನೆಲುಬು ಸಹಕಾರಿ ಚಳವಳಿ. ರೈತರಿಗೆ ಪತ್ತಿನ ಅಗತ್ಯವಿದ್ದು, ಲಭ್ಯವಾಗದಿದ್ದರೆ ಕೃಷಿ ಮಾಡುವುದು ಕಷ್ಟವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದರು.ಇಲ್ಲಿನ ಗುರುಭವನದಲ್ಲಿ ಭಾನುವಾರ ಹಾವೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ - ಶಿಕ್ಷಕಿಯರ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕುಗಳನ್ನು ಆಶ್ರಯಿಸಿ ರೈತರು ಒಕ್ಕಲುತನ ಮಾಡುವುದು ಕಷ್ಟ. ಹೀಗಾಗಿಯೇ ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಗೆ ಕ್ರಮ ಕೈಗೊಂಡಿದೆ ಎಂದರು.ದೇಶದಲ್ಲಿ ಮೂರು ರಾಜ್ಯಗಳು ಮಾತ್ರ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿವೆ. ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಹಕಾರ ಚಳವಳಿ ದೊಡ್ಡ ಪ್ರಮಾಣದಲ್ಲಿ ಆಗಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಹಿಂದಿನ ಮುಖ್ಯಮಂತ್ರಿ ಸಹಕಾರ ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಇದು ಸಹಕಾರಿ ಚಳವಳಿಯ ಮಹತ್ವಕ್ಕೆ ಸಾಕ್ಷಿ ಎಂದರು. ಅವಿಭಜಿತ ಧಾರವಾಡ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಹಕಾರ ಚಳವಳಿಗೆ ಕಾರಣರಾದ ಗದಗ ಜಿಲ್ಲೆಯ ಕಣಗಿನಹಾಳದ ಸಿದ್ದನಗೌಡರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. ಜವಾಹರಲಾಲ ನೆಹರು ಅವರ ಕೊಡುಗೆಯೂ ದೊಡ್ಡದಿದೆ. ಸೇವಾ ಮನೋಭಾವ ಇದ್ದವರು ಮಾತ್ರ ಈ ಕ್ಷೇತ್ರಕ್ಕೆ ಬರಬೇಕು. ಆಗ ಮಾತ್ರ ಸಹಕಾರಿ ಸಂಸ್ಥೆಗಳು ಏಳ್ಗೆ ಕಾಣಲು ಸಾಧ್ಯ ಎಂದರು.
ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿ ಸುಮಾರು 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 1919ರಲ್ಲಿ ಕೇವಲ ₹60 ಸಾವಿರ ಷೇರು ಬಂಡವಾಳದೊಂದಿಗೆ ಆರಂಭವಾದ ವಿಜಯಪುರ ಡಿಸಿಸಿ ಬ್ಯಾಂಕ್ ಇಂದು ₹13 ಸಾವಿರ ಕೋಟಿ ವಹಿವಾಟು ಹೊಂದಿದ್ದು, ಹೆಮ್ಮರವಾಗಿ ಬೆಳೆದು ರೈತಾಪಿ ವರ್ಗಕ್ಕೆ ನೆರಳನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕುಗಳು ಕಾರ್ಯನಿರ್ವಿಸುತ್ತಿದ್ದು, ಅವುಗಳಲ್ಲಿ ಕೇವಲ ಐದಾರು ಬ್ಯಾಂಕುಗಳು ಮಾತ್ರ ಆರ್ಥಿಕವಾಗಿ ಸದೃಢವಾಗಿವೆ ಎಂದರು.ಸಹಕಾರಿ ತತ್ವದ ಅಡಿಯಲ್ಲಿ ಕ್ಷೀರ ಕ್ರಾಂತಿಯೇ ಆಗಿದೆ. ನೀರು ಸಿಗದ ಹಳ್ಳಿಗಳಲ್ಲಿ ಸಾವಿರಾರು ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ ಒಂದು ಕೋಟಿಗೂ ಅಧಿಕ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಶಾಲಾ ಮಕ್ಕಳಿಗೆ ರಾಜ್ಯ ನಿತ್ಯ ಹಾಲು ಪೂರೈಕೆ ಮಾಡುವ ನಿರ್ಧಾರ ಕೈಗೊಳ್ಳಲು ಸಹಕಾರ ಚಳವಳಿಯೇ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪ್ರತಿನಿಧಿಗಳು, ಹೆಚ್ಚವರಿ ಶಿಕ್ಷಕರ ವರ್ಗಾವಣೆ ಕೈಬಿಡಬೇಕು. 150ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಎಲ್ಲ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಿ ಪದವೀಧರ ಶಿಕ್ಷಕರ ಸಮಸ್ಯೆ ಪರಿಹರಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರಲ್ಲಿ ಮನವಿ ಸಲ್ಲಿಸಿದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಹೂವಿನಹಡಗಲಿ ಮಸ್ಟರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಡೈರೆಕ್ಟರ್ ಹಾಫೀಝ್ ಮುಹಮ್ಮದ್ ಸಫ್ಯಾನ್ ಸಖಾಪಿ ಅಲ್‌ಹಿಕಲಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಎಂ.ಎಂ. ಮೈದೂರ, ಡಿಡಿಪಿಐ ಸುರೇಶ ಹುಗ್ಗಿ ಇತರರು ಇದ್ದರು. ಸಂಘದ ಅಧ್ಯಕ್ಷ ಸತೀಶ ಶಂಕಿನದಾಸರ ಅಧ್ಯಕ್ಷತೆ ವಹಿಸಿದ್ದರು.ಅರ್ಬನ್ ಬ್ಯಾಂಕ್ ಆಗಲಿಶತಮಾನೋತ್ಸವ ಸಂಭ್ರಮದಲ್ಲಿರುವ ಹಾವೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರ ಸಂಘ ಅರ್ಬನ್ ಬ್ಯಾಂಕ್ ಆಗಿ ಬೆಳೆಯಲಿ ಎಂದು ಸಚಿವ ಶಿವಾನಂದ ಪಾಟೀಲ ಆಶಿಸಿದರು.
ಈಗ ಶೇ. 11ರಷ್ಟು ಲಾಭಾಂಶ ಕೊಡುತ್ತಿರುವುದು ಸಂಘದ ಆರ್ಥಿಕ ಸ್ಥಿತಿಯನ್ನು ಬಿಂಬಿಸುತ್ತಿದೆ. ಆದರೆ ಇದಕ್ಕೂ ಹೆಚ್ಚು ಲಾಭಾಂಶ ಕೊಡುವ ಪ್ರಯತ್ನ ಮಾಡಬೇಡಿ. ಲಾಭದಲ್ಲಿದೆ ಎಂದು ಶೇ. 20ಕ್ಕೂ ಅಧಿಕ ಡಿವಿಡೆಂಡ್ ನೀಡಿ ನಂತರ ನಷ್ಟ ಅನುಭವಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ ಎಂದರು.ಸಹಕಾರ ಖಾತೆ ಸಿಗಬೇಕಿತ್ತುಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಾಗೂ ವಿಜಯಪುರ ಡಿಸಿಸಿ ಬ್ಯಾಂಕನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿದ ಶಿವಾನಂದ ಪಾಟೀಲರಿಗೆ ಸಹಕಾರ ಖಾತೆ ಸಿಗಬೇಕಿತ್ತು ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ್ ತಿಳಿಸಿದರು.ಬಸವರಾಜ ಶಿವಣ್ಣನವರ್ ಅವರ ಮಾತನ್ನು ಅನುಮೋದಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡರ್, ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬರುವವರಲ್ಲಿ ಸಂಸ್ಥೆಗಳನ್ನು ಮುಳುಗಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಹಕಾರ ಚಳವಳಿಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವಂತಹ ಛಾತಿಯ ಶಿವಾನಂದ ಪಾಟೀಲರಿಗೆ ಸಹಕಾರಿ ಖಾತೆ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದರು.