ಆರ್ಥಿಕ ಸಮಾನತೆಯಲ್ಲಿ ಸಹಕಾರಿ ಚಳವಳಿ ಮಹತ್ತರ ಪಾತ್ರ

KannadaprabhaNewsNetwork | Published : May 30, 2024 12:49 AM

ಸಾರಾಂಶ

೧೧೮ ವರ್ಷಗಳ ಇತಿಹಾಸವಿರುವ ಸಹಕಾರ ಚಳವಳಿ ಪ್ರಸ್ತುತ ದೇಶದಲ್ಲಿ ಆರ್ಥಿಕ ಸಮಾನತೆಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ೧೧೮ ವರ್ಷಗಳ ಇತಿಹಾಸವಿರುವ ಸಹಕಾರಿ ಚಳವಳಿ ಪ್ರಸ್ತುತ ದೇಶದಲ್ಲಿ ಆರ್ಥಿಕ ಸಮಾನತೆಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.ನಗರದ ಮಹಾಮನೆ ಸಭಾಂಗಣದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗಾಗಿ ಹಮ್ಮಿಕೊಂಡಿದ್ದ ಆಡಳಿತ ಪರಿಣಿತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಿ ಕ್ಷೇತ್ರವನ್ನು ಪುನರ್ ಸಂಘಟಿಸುವ ದೃಷ್ಟಿಯಿಂದ ಸಹಕಾರಿಗಳಿಗೆ ಸ್ವಾಯತ್ತತೆಯನ್ನು ನೀಡಿ, ಸ್ವಯಂ ಆಡಳಿತ ಹಾಗೂ ಸ್ವಯಂ ನಿಯಂತ್ರಣದ ಅವಕಾಶವನ್ನು ಒದಗಿಸುವ ದೃಷ್ಟಿಯಿಂದ ೨೦೦೧ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಇದುವರೆಗೆ ೬೨೫೦ಕ್ಕಿಂತಲೂ ಹೆಚ್ಚಿನ ಸೌಹಾರ್ದ ಸಹಕಾರಿಗಳು ನೋಂದಣಿಯಾಗಿ ೬೦ ಲಕ್ಷಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿದ್ದು ಉತ್ತಮ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.ಇದರ ಮಹತ್ವವನ್ನೇ ಅರಿತು ೨೦೨೦ರಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ಮಂತ್ರಾಲಯವನ್ನು ಸ್ಥಾಪಿಸಿ, ಅದಕ್ಕೊಂದು ಮಹತ್ತರ ಸ್ಥಾನವನ್ನು ನೀಡಿದೆ. ರೈತ, ಕೈಗಾರಿಕೊದ್ಯಮ, ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ಸಹಕಾರಿಗಳು ಅರಂಭಗೊಂಡು ಉತ್ತಮ ವ್ಯವಹಾರವನ್ನು ನಡೆಸುತ್ತಿವೆ ಎಂದರು.ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸರ್ವರನ್ನು ಒಳಗೊಂಡ ಸಹಕಾರ ಚಳವಳಿ ಹಾಸು ಹೊಕ್ಕಾಗಿದೆ. ಈ ಸೌಹಾರ್ದ ಸಹಕಾರಿಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಯ ಪ್ರತಿಯೊಬ್ಬರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಈ ಸಮಾಜದಲ್ಲಿ ಹುಟ್ಟಿ ಸಮಾಜಕ್ಕೊಂದು ಸೇವೆ ಮಾಡುವ ಅವಕಾಶ ಈ ಸಹಕಾರಿಯಲ್ಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಚಳವಳಿಯ ಮಾತೃ ಸಂಸ್ಥೆಯಾಗಿ ಹಾಗೂ ಶಾಸನಬದ್ಧವಾಗಿ ರಚನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಸದಸ್ಯ ಸಹಕಾರಿಗಳಿಗೆ ಕಾಲಕ್ಕೆ ತಕ್ಕಂತೆ ಅಗತ್ಯವಾದ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇದು ರಾಜ್ಯಾದ್ಯಂತ ಆಗಬೇಕೆಂಬ ಉದ್ದೇಶದಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ೨೫ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಇದ್ದು ಉತ್ತಮವಾಗಿ ಕಾರ್ಯನಿರ್ವಹಿಸುವ ಹಾಗೂ ಆರ್ಥಿಕ ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಂಡು ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿಗಳನ್ನು ಸದೃಢಗೊಳಿಸಿ ಎಂದರು.ಮುಖ್ಯ ಅತಿಥಿಯಾಗಿದ್ದ ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್ ಮಾತನಾಡಿ, ಕಾಯ್ದೆಗೋಸ್ಕರ ಸಭೆಗಳನ್ನು ಮಾಡಬೇಡಿ. ಈ ಗಡಿಯಲ್ಲಿ ಸೌಹಾರ್ದ ಸಹಕಾರಿಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಆಡಳಿತ ಪರಿಣಿತಿ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡುತ್ತಿದ್ದಾರೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಆರ್ಥಿಕ, ಸಾಮಾಜಿಕ ಬದ್ಧತೆಯನ್ನು ಕಲ್ಪಿಸುವಲ್ಲಿ ಸೌಹಾರ್ದ ಸಹಕಾರಿ ಕಾರ್ಯೋನ್ಮುಖವಾಗಿದೆ. ಈ ಗಡಿ ಜಿಲ್ಲೆಯಲ್ಲಿ ಮಹಿಳಾ ಸಹಕಾರಿಗಳು ಮುಂದೆ ಬರಬೇಕು ಇದಕ್ಕಾಗಿ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಎಸ್. ಕೆ. ಮಂಜುನಾಥ್ ಮಾತನಾಡಿ, ಈ ಜಿಲ್ಲೆಯಲ್ಲಿ ಕನಿಷ್ಠ ೬೦ ಸೌಹಾರ್ದ ಸಹಕಾರಿಗಳು ಇರಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಒಂದು ಒಕ್ಕೂಟ ಮಾಡಬಹದು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕ ರಾಮಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಜಿಲ್ಲಾ ನಿರ್ದೇಶಕ ಬಾಲಸುಬ್ರಹ್ಮಣ್ಯಂ, ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಇದ್ದರು.

Share this article