ಕನ್ನಡಪ್ರಭ ವಾರ್ತೆ ಬೀದರ್
ನಗರದ ದೇವಿ ಕಾಲೋನಿ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿ ನುಡಿ ನಮನ ಸಲ್ಲಿಸಿ ಒಂದು ನಿಮಿಷದ ಮೌನಾಚರಣೆ ಮಾಡಿ ಅಕ್ಕನವರ ಅಗಲಿಕೆ ಅಪಾರ ದುಃಖ ಉಂಟು ಮಾಡಿದೆ ಎಂದರು.
ಬ್ಯಾಂಕ್ ಅಧ್ಯಕ್ಷ ರಮೇಶ ಮಠಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿಗೆ ವಚನಗಳೇ ಜೀವಾಳವಾಗಿದ್ದವು. ಅಂತೆಯೇ ವಚನ ಸಂರಕ್ಷಣೆ ದಿನವನ್ನು ವಚನ ವಿಜಯೋತ್ಸವವಾಗಿ ಆಚರಿಸುತ್ತಿದ್ದರು ಎಂದು ಹೇಳಿದರು.ಅಕ್ಕ ವಚನಗಳಿಗೆ ಪರಮೋಚ್ಛ ಗೌರವ ಸಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ದಿನಾಲು ಐದು ವಚನ ಕಡ್ಡಾಯವಾಗಿ ಓದಬೇಕೆಂಬ ನಿಯಮ ಜಾರಿಗೆ ತಂದರು. ಇದರಿಂದ ಮನೆ ಮನೆಯಲ್ಲಿ ವಚನಗಳ ಓದು ಆರಂಭವಾಯಿತು. ಹಳ್ಳಿ-ಪಟ್ಟಣಗಳೆನ್ನದೆ ಓಡಾಡಿ ಬಸವ ತತ್ವ ಪ್ರವಚನ ಮಾಡಿ, ಬಸವಾದಿ ಶರಣರ ತತ್ವಗಳ ಪ್ರಸಾರಗೈದರು ಎಂದು ತಿಳಿಸಿದರು.
ಅಕ್ಕನವರು ಲಿಂಗೈಕ್ಯರಾಗಿದ್ದರಿಂದ ಶರಣ ಲೋಕದಲ್ಲಿ ಶೂನ್ಯ ಆವರಿಸಿದಂತಾಗಿದೆ ಎಂದರು.
ಬ್ಯಾಂಕ್ ನಿರ್ದೇಶಕ ಓಂಕಾರ ಪಾಟೀಲ ಉಪಸ್ಥಿತರಿದ್ದರು. ಉದಯಕುಮಾರ ಲದ್ದೆ, ಸಿ.ಎಸ್. ಗಣಾಚಾರಿ ಪ್ರಾರ್ಥನೆಗೈದರು. ವ್ಯವಸ್ಥಾಪಕ ಜಗದೀಶ ಮೋಳಕೇರಿ ಸ್ವಾಗತಿಸಿ, ವಂದಿಸಿದರು.