ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟದಿಂದ ಬಸ್ ನಿಲ್ದಾಣದಲ್ಲಿರುವ ಪ್ರವಾಸಿಗರಿಗೆ ಪತ್ರಿಕೆ ನೀಡುವ ಮೂಲಕ ಪತ್ರಿಕೆ ಮಹತ್ವ ಕುರಿತು ಜಾಗೃತಿ ಸಾರಿ, ವಿನೂತನ ಮಾದರಿಯಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಮೊಬೈಲ್ ಬಳಕೆ ಕಣ್ಣಿನ ದೋಷ, ಏಕಾಗ್ರತೆ, ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಿದ್ದರೆ ದಿನಪತ್ರಿಕೆ ಓದುವ ಹವ್ಯಾಸವು ಜ್ಞಾನದ ವೃದ್ಧಿಯ ಜೊತೆಗೆ ಮಾನಸಿಕ ಒತ್ತಡವು ಕಡಿಮೆ ಮಾಡುತ್ತದೆ ಎಂದು ಭಾರತೀಯ ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ ಹೇಳಿದರು.ಅವರು ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟದಿಂದ ಆಯೋಜಿಸಿದ ವಿನೂತನ ಮಾದರಿಯಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಬಸ್ ನಿಲ್ದಾಣದಲ್ಲಿರುವ ಪ್ರವಾಸಿಗರಿಗೆ ಪತ್ರಿಕೆ ನೀಡುವ ಮೂಲಕ ಪತ್ರಿಕೆ ಮಹತ್ವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡ ಸಂಧರ್ಭದಲ್ಲಿ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ನಡೆಯುವ ಘಟನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುವದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಹೊತ್ತಿರುತ್ತಾರೆ ಎಂದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆಯು ಸಮಾಜದ ಕಣ್ಣು ಮತ್ತು ಕಿವಿಯಾಗಿದ್ದು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ಪತ್ರಿಕೆಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಮೂಢನಂಬಿಕೆಗಳು, ಭ್ರಷ್ಟಾಚಾರ ಹಾಗೂ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿ, ಜನಸಾಮಾನ್ಯರ ಧ್ವನಿಯಾಗಿ, ಸಮಾಜದಲ್ಲಿ ಜಾಗೃತಿ ಮೂಡಿಸುವದರ ಜೊತೆಗೆ ದೇಶವಿದೇಶಗಳ ಪ್ರಚಲಿತ ವಿದ್ಯಮಾನಗಳು, ಕೃಷಿ, ವಿಜ್ಞಾನ, ಆರೋಗ್ಯ ಮತ್ತು ರಾಜಕೀಯದ ಸಂಪೂರ್ಣ ಮಾಹಿತಿಯನ್ನು ನೀಡುವ ಪತ್ರಿಕಾರಂಗ ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಬಹು ಮುಖ್ಯ ಪಾತ್ರ ವಹಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಹಿರಿಯ ವರದಿಗಾರ ಶೈಲೇಂದ್ರ ಕಾವಡಿ, ಅಧ್ಯಕ್ಷ ಸಂಜುಕುಮಾರ ಜುನ್ನಾ, ಪತ್ರಕರ್ತ ಗುಂಡಪ್ಪ ಅತಿವಾಳ, ಸಂಜೀವಕುಮಾರ, ಸಿದ್ಧಾರ್ಥ ಜಾನವೀರ, ಸುಶೀಲಕುಮಾರ ಭೋಲಾ, ಗೋಪಾಲರೆಡ್ಡಿ, ಅಖಿಲೇಷ ಮೇಟಿ, ಲೊಕೇಶ, ಅನಂತ ಮಾಳಗೆ, ದಶರಥ ದಾಂಡೇಕರ್, ವಿಠಲ ಶಿವನಾಯಕ, ರಾಹುಲ್ ಬೋತಗಿ, ಯೋಗಿ ಸಾಗರ, ಶಿವಕುಮಾರ ವರವಟ್ಟಿ, ಮಾಣಿಕ ಪವಾರ ಸೇರಿದಂತೆ ಅನೇಕರಿದ್ದರು.