ಧಾರವಾಡ: ಸಹಕಾರ ವಲಯ ಪ್ರಸ್ತುತ ಜನರ ಬಹುತೇಕ ಬೇಡಿಕೆಗಳನ್ನು ಪೂರೈಸುವ ಮಹತ್ವದ ವ್ಯವಸ್ಥೆಯಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜೇಗೌಡ ಹೇಳಿದರು.
ಹಾಲು, ರಸಗೊಬ್ಬರ, ಅಡಕೆ ಮುಂತಾದ ಕೃಷಿ ಉತ್ಪನ್ನಗಳ ಸಲುವಾಗಿ ದೇಶದಲ್ಲಿ ಈಗ ಲಕ್ಷಾಂತರ ಸಹಕಾರ ಸಂಘಗಳು ಉಪಯುಕ್ತ ಸೇವೆ ಸಲ್ಲಿಸುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಮಧ್ಯಮ ವರ್ಗದವರು, ಬಡವರು, ಕೂಲಿಕಾರರ ಬದುಕಿಗೆ ಈ ಸಂಘಗಳು ಆಸರೆಯಾಗಿ ನಿಂತಿವೆ. ಇದೇ ವೇಳೆ ಸ್ವಲ್ಪ ಮಟ್ಟಿನ ನಿರುದ್ಯೋಗ ಬವಣೆಯನ್ನು ನೀಗಿಸಿವೆ ಎಂದರು.
ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿದ ವೈಶುದೀಪ ಫೌಂಡೇಶನ್ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿ, ಗ್ರಾಮಾಂತರ ಪ್ರದೇಶದ ಜನರಿಗೆ ಸಕಾಲಕ್ಕೆ ಆರ್ಥಿಕ ನೆರವು ಸಿಗುತ್ತಿಲ್ಲ. ಆದರೆ, ಸಹಕಾರ ಸಂಘಗಳು ತಮ್ಮ ಪ್ರಾಮಾಣಿಕ ಸೇವೆಯನ್ನು ಒದಗಿಸುತ್ತಿವೆ. ಅತಿ ಶೀಘ್ರ ಸಮಯದಲ್ಲಿ ಸಹಕಾರ ಸಂಘಗಳು ಸ್ವಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ಕೈಕೊಳ್ಳಲು ಆರ್ಥಿಕ ನೆರವು ನೀಡುವ ಮೂಲಕ ಬಹಳಷ್ಟು ಕುಟುಂಬಗಳ ಸ್ವಾವಲಂಬನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಕಲ ಸೌಲಭ್ಯ ಒದಗಿಸಲು ಮುಂದಾಗಿರುವ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿಯ ಪ್ರಯತ್ನ ಶ್ಲಾಘನೀಯ ಎಂದರು.ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಭಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು, ಸುಳ್ಳದ ಶ್ರೀ ಸಿದ್ದರಾಮ ಶಿವಾಚಾರ್ಯರು, ಗರಗದ ಶ್ರೀ ಪ್ರಶಾಂತ ದೇವರು ಸಮಾರಂಭದ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ ಸ್ವ-ಸಹಾಯ ಸಂಘಗಳಿಗೆ ಚಾಲನೆ ನೀಡಿದರು. ಉದ್ಯಮಿ ಗೋವಿಂದ ಜೋಶಿ ಅವರು ಸಾಲ ಪತ್ರ ಮತ್ತು ಗ್ರಾಪಂ ಅಧ್ಯಕ್ಷೆ ನೀಲವ್ವ ತಿದಿ ಶೇರು ಪತ್ರಗಳನ್ನು ವಿತರಿಸಿದರು.
ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಸ್ಥಾಪಕ ಮಲ್ಲಿಕಾರ್ಜುನ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಪ್ರಾರ್ಥಿಸಿದರು. ಆಸ್ಮಾ ನದಾಫ್ ನಿರೂಪಿಸಿದರು. ಶೈಲಜಾ ದೊಡ್ಡಮನಿ ವಂದಿಸಿದರು.