ಓರ್ವಿಲ್ಲ್ ಫರ್ನಾಂಡೀಸ್
ಹಳಿಯಾಳ: ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಬಿಜೆಪಿಗೆ ಬಲ ತುಂಬಿದರೆ, ಘೋಟ್ನೇಕರ ಕಟ್ಟಾ ಎದುರಾಳಿಯೆಂದೇ ಗುರುತಿಸಿಕೊಳ್ಳುವ ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೇಕರ ಚುನಾವಣೆ ಗೆಲ್ಲಲು ಅನುಸರಿಸಿದ ತಂತ್ರ-ಮಂತ್ರಗಳೆಲ್ಲವೂ ವಿಫಲವಾದ ಪರಿಣಾಮ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿದೆ.ಹಳಿಯಾಳ-ದಾಂಡೇಲಿ ತಾಲೂಕಿನ 11 ಸಹಕಾರಿ ಸಂಘಗಳ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 7 ಸಹಕಾರಿ ಸಂಘಗಳಲ್ಲಿ ಗೆಲುವು ಸಾಧಿಸಿದ್ದರೆ, 3 ಸಹಕಾರಿ ಸಂಘಗಳ ಮತ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಾಂಗ್ರೆಸ್ ಕೇವಲ ಒಂದೇ ಸಹಕಾರಿ ಸಂಘದಲ್ಲಿ ಗೆದ್ದಿದೆ.
ಯಡೋಗಾ ಸಹಕಾರಿ ಸಂಘದಲ್ಲಿ ಸದಾ ಪ್ರಾಬಲ್ಯ ಹೊಂದಿದ್ದ ಬಿಜೆಪಿ ಪಾಲಿಗೆ ಈಗ ಘೋಟ್ನೇಕರ ಅವರು ಪಟ್ಟಣದಲ್ಲಿನ ರೈತ ಸೇವಾ ಸಹಕಾರಿ ಸಂಘ, ಮದ್ನಳ್ಳಿ, ಮಂಗಳವಾಡ, ತೇರಗಾಂವ, ಗುಂಡೋಳ್ಳಿ, ನಾಗಶೆಟ್ಟಿಕೊಪ್ಪ ಸಂಘಗಳನ್ನು ಗೆದ್ದು ಸೇರ್ಪಡೆ ಮಾಡಿದ್ದರೆ, ಬಿ.ಕೆ. ಹಳ್ಳಿ ಸಹಕಾರಿ ಸಂಘ ಮಾತ್ರ ಕಾಂಗ್ರೆಸ್ ಮಾನ ಕಾಪಾಡಿದೆ. ಬೆಳವಟಗಿ, ಕಾವಲವಾಡ ಮತ್ತು ಆಲೂರ ಸಹಕಾರಿ ಸಂಘಗಳ ಮತ ಎಣಿಕೆಗೆ ನ್ಯಾಯಾಲಯ ತಡೆ ನೀಡಿದೆ.ಬಿಜೆಪಿಗೆ ಘೋಟ್ನೇಕರ ಬಲ
ಸಹಕಾರಿ ಸಂಘದ ಚುನಾವಣೆಗಳ ಹೊಸ್ತಿಲಲ್ಲಿ ಹಿರಿಯ ಮುಖಂಡ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ರಾಜಕೀಯ ನಡೆ ಫಲಪ್ರದವಾಗಿದೆ.ಘೋಟ್ನೇಕರ ಹಾಗೂ ಸುನೀಲ ಮೈತ್ರಿ ರಾಜಕಾರಣದ ಪರಿಣಾಮ ಮುಸ್ಲಿಂ ಅಲ್ಪಸಂಖ್ಯಾತ ಮತಬ್ಯಾಂಕ್ ಸಹ ಬಿಜೆಪಿ ಪರ ವಾಲಿರುವುದು ಈ ಚುನಾವಣೆಯಲ್ಲಿ ಕಂಡು ಬಂದ ವಿಶೇಷತೆಯಾಗಿದೆ. ಸುನೀಲ ಹೆಗಡೆ ತಮ್ಮ ಪ್ರಭಾವ ಬಳಸಿಕೊಂಡು ತನ್ನ ಶಿಷ್ಯ ಉದಯ ಜಾಧವ ಅವರು ಅವಿರೋಧವಾಗಿ ಆಯ್ಕೆಯಾಗಿಸುವಲ್ಲಿ ಯಶಸ್ವಿಯಾದರು. ಸುನೀಲ ಎಸೆದ ದಾಳಕ್ಕೆ ಜಾಧವ ಎದುರು ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಚಿಗರಿ ಅವರು ಕಣದಿಂದಲೇ ಹಿಂದಕ್ಕೆ ಸರಿದರು. ಇನ್ನೊಂದೆಡೆ ತೀರಾ ಕೂತುಹೂಲ ಸೃಷ್ಟಿಸಿದ ಹಣಾಹಣಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮುಸ್ಲಿಂ ಅಭ್ಯರ್ಥಿ ಲತೀಪಣ್ಣನವರ ಎದುರಾಳಿ ಕಾಂಗ್ರೆಸ್ ಬೆಂಬಲಿತ ದುರ್ಗಾಡಿ ಅವರನ್ನು ಸೋಲಿಸುವ ಮೂಲಕ ಅಲ್ಪಸಂಖ್ಯಾತರು ಕಾಂಗ್ರೆಸ್ ಮತ ಬ್ಯಾಂಕ್ ಅಲ್ಲ ಎಂಬ ಸೂಚನೆ ನೀಡಿದರು. .
ಮಕಾಡೆ ಬಿದ್ದ ಕಾಂಗ್ರೆಸ್ಘೋಟ್ನೇಕರ ಹಾಗೂ ಸುನೀಲ ಅವರ ಕಾರ್ಯತಂತ್ರದ ಎದುರು ಕಾಂಗ್ರೆಸ್ ಮಕಾಡೆ ಮಲಗಿರುವುದು ಫಲಿತಾಂಶವೇ ಸ್ಪಷ್ಟಪಡಿಸುತ್ತದೆ. ಘೋಟ್ನೇಕರ ಅವರನ್ನು ಸೋಲಿಸಬೇಕೆಂಬ ಒಂದಂಶದ ಕಾರ್ಯಕ್ರಮದಿಂದ ರೂಪಿಸಿದ ಕಾಂಗ್ರೆಸ್ ತಂತ್ರ-ಮಂತ್ರ ಪ್ರಯತ್ನಗಳು ಯಶ ನೀಡಲಿಲ್ಲ. ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ಅವರು ಘೋಟ್ನೇಕರ ಹಾಗೂ ಸುನೀಲ ಹೆಗಡೆ ಜೋಡಿ ನಡೆ ಅಳೆಯುವಲ್ಲಿ, ಅಭ್ಯರ್ಥಿಗಳ, ಪ್ರಚಾರ, ಚುನಾವಣಾ ರಣತಂತ್ರ ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆಂಬುದು ಫಲಿತಾಂಶ ಸಾರುತ್ತಿದೆ. ರೈತರ ಬೆಂಬಲ
ಇದು ರೈತರ ಚುನಾವಣೆ, ಸಹಕಾರಿ ಸಂಘ ಹಾಗೂ ಕೆಡಿಸಿಸಿ ಬ್ಯಾಂಕ್ ಮೂಲಕ ಘೋಟ್ನೇಕರ ಅವರು ರೈತರಿಗೆ ಮಾಡಿದ ಅನುಕೂಲತೆ ನಮ್ಮ ಕೈಹಿಡಿದಿವೆ. ಘೋಟ್ನೇಕರ ಅವರಿಂದಲೇ ಮಾತ್ರ ರೈತರ ಅಭಿವೃದ್ಧಿ ಮತ್ತು ಹಿತರಕ್ಷಣೆ ಸಾಧ್ಯ ಎಂದು ಮನಗಂಡು ರೈತರು ತಮ್ಮ ಬೆಂಬಲ ಆಶೀರ್ವಾದವನ್ನು ಘೋಟ್ನೇಕರ ಅವರಿಗೆ ನೀಡಿದ್ದಾರೆ.ತುಕಾರಾಮ ಗೌಡಾ, ಬಿಜೆಪಿ ಯುವನಾಯಕ, ಸಹಕಾರಿ ಮುಖಂಡ
ದೋಸ್ತಿ ರಾಜಕಾರಣಚುನಾವಣೆಯನ್ನು ಗೆಲ್ಲಲು ಬಿಜೆಪಿಯು ಅನುಸರಿಸಿದ ತಂತ್ರದೆದುರು ನಾವು ಸೋತಿದ್ದೇವೆ. ಈ ದೋಸ್ತಿ ರಾಜಕಾರಣ ಬಹುದಿನಗಳ ಕಾಲ ಉಳಿಯಲ್ಲ, ಮುಂಬರುವ ವಿಧಾನಸಭಾ ಚುನಾವಣೆಯ ಮುನ್ನವೇ ಈ ದೋಸ್ತಿ ಮುಗಿಯಲಿದೆ.
ಉಮೇಶ ಬೊಳಶೆಟ್ಟಿ , ಕಾಂಗ್ರೆಸ್ ವಕ್ತಾರ