ಸಹಕಾರಿ ಸಂಘಗಳು ರೈತರ ವಿಶ್ವಾಸ ಗಳಿಸಲಿ: ಸಹಕಾರಿ ಸಚಿವ ರಾಜಣ್ಣ

KannadaprabhaNewsNetwork | Published : Oct 7, 2024 1:43 AM

ಸಾರಾಂಶ

ಸಹಕಾರಿ ಸಂಘಗಳು ರೈತರ, ಜನರ ವಿಶ್ವಾಸಗಳಿಸುವಂತಾಗಬೇಕು.

ಹೊಸಪೇಟೆ: ಸಹಕಾರಿ ಸಂಘಗಳು, ರೈತರ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಗಳಿಸಲಿ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನೂತನವಾಗಿ ಆರಂಭಗೊಂಡ ನೂತನ ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

ದೇಶದ ಬೆನ್ನೆಲುಬಾದ ರೈತಾಪಿ ಕುಟುಂಬದ ಜನರಿಗೆ ಕ್ಷೇಮಾಭಿವೃದ್ಧಿ ಸಂಘ ಇರಬೇಕೆಂಬ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನವರು ಈ ಸಂಘವನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಹಕಾರಿ ಸಂಘಗಳು ರೈತರ, ಜನರ ವಿಶ್ವಾಸಗಳಿಸುವಂತಾಗಬೇಕು. ಬಳ್ಳಾರಿ ಮತ್ತು ವಿಜಯನಗರ ಎರಡೂ ಅವಳಿ ಜಿಲ್ಲೆಗಳ ರೈತರ ಅಭ್ಯುದಯಕ್ಕೆ ರೈತರ ಕ್ಷೇಮಾಭಿವೃದ್ಧಿ ಸಂಘವು ಪೂರಕವಾಗಿ ಕಾರ್ಯನಿರ್ವಹಿಸಲಿ ಎಂದು ಸಚಿವರು ತಿಳಿಸಿದರು.

ಸಹಕಾರಿ ಆಂದೋಲನದಡಿ ಗ್ರಾಮ ಪಂಚಾಯಿತಿಗೊಂದು ಸಹಕಾರಿ ಸಂಘ ಮಾಡಬೇಕು ಎಂದು ಸಹಕಾರಿ ಸಂಘಗಳ ನಿರ್ದೇಶಕರು ಕೇಳುತ್ತಿದ್ದಾರೆ. ಈ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದರು.

ಸಹಕಾರಿ ಸಂಸ್ಥೆಗಳು ರೈತರ ಹಿತ ಕಾಯಬೇಕು. ಸಹಕಾರಿ ಸಂಘಗಳಲ್ಲಿ ಕೇವಲ ಬೆಳೆ ಸಾಲ ಪಡೆಯದೇ ತಮ್ಮೆಲ್ಲ ವಹಿವಾಟುಗಳನ್ನು ಸಂಘದ ಬ್ಯಾಂಕುಗಳಲ್ಲಿಯೇ ಮಾಡುವಂತಹ ಪ್ರಯತ್ನವನ್ನು ಎಲ್ಲಾ ಸಹಕಾರಿಗಳು ಮಾಡಬೇಕು. ಬೆಳೆಸಾಲದ ಹೊರತಾಗಿಯೂ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳಿದ್ದು ಅವುಗಳÀನ್ನು ಸಹ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಕ್ಷೇಮಾಭಿವೃದ್ಧಿ ಸಂಘಗಳಿದ್ದು, ರೈತರ ಕ್ಷೇಮಾಭಿವೃದ್ಧಿ ಸಂಘವಿರಲಿಲ್ಲ. ಇದು ಬಹುದಿನಗಳ ಬೇಡಿಕೆಯೂ ಆಗಿತ್ತು. ಅದರಂತೆ ಹೊಸಪೇಟೆ ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘವನ್ನು ಪ್ರಾರಂಭಿಸಲಾಗಿದೆ ಎಂದರು. ಮಕ್ಕಳ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ.

ಶಾಸಕ ಹೆಚ್.ಆರ್.ಗವಿಯಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ನಾರಾ ಭರತ್ ರೆಡ್ಡಿ, ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯ್ಕ್, ಬಿ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಜಯಪ್ರಕಾಶ್ ಸೇರಿದಂತೆ ಹಲವು ಗಣ್ಯರು, ಬ್ಯಾಂಕಿನ ವಿವಿಧ ತಾಲ್ಲೂಕುಗಳ ನಿರ್ದೇಶಕರು, ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Share this article