- ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಭೆಯಲ್ಲಿ ಬಚ್ಚೇಗೌಡರ ಸಲಹೆ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ರೈತರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ನಿರಂತರ ಶ್ರಮಿಸಬೇಕು ಎಂದು ಮಾಜಿ ಸಂಸದ ಬಚ್ಚೇಗೌಡ ಹೇಳಿದರು.ನಗರದಲ್ಲಿ ಆಯೋಜಿಸಿದ್ದ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 49ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನಲ್ಲಿ ಒಟ್ಟು ಒಂಬತ್ತು ಸಹಕಾರ ಸಂಘಗಳಿದ್ದು, ಎಲ್ಲಕ್ಕಿಂತ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಂಚೂಣಿಯಲ್ಲಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಪೂಜೇನ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, 2023-24ನೇ ಸಾಲಿನಲ್ಲಿ 1.52 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಾಲ ವಸೂಲಾತಿಯಲ್ಲಿ ಶೇ.99.20 ಪ್ರಗತಿ ಸಾಧಿಸಿದೆ. ಸಂಘ ಈ ಬಾರಿಯೂ ಷೇರುದಾರರಿಗೆ ಶೇ.25 ಗರಿಷ್ಠ ಡಿವಿಡೆಂಟ್ ಘೋಷಿಸಿದೆ. ಪ್ರಸ್ತುತ ಸಂಘದಲ್ಲಿ ೫೧೬೧ ಸದಸ್ಯರಿದ್ದು, 2.77 ಕೋಟಿ ಆಪತ್ ಧನ, 126.2 ಕೋಟಿ ಸದಸ್ಯರ ಠೇವಣಿ ಇದೆ. ಒಟ್ಟು ದುಡಿಯುವ ಬಂಡವಾಳ 141.1 ಕೋಟಿ ಇದೆ. ಹೂಡಿಕೆಗಳು 38.9 ಕೋಟಿ, ಬಡ್ಡಿ ರಹಿತ ಬೆಳೆಸಾಲ 8.66 ಕೋಟಿ, ಆಧಾರ ಸಾಲಗಳು 285.5 ಕೋಟಿ ನೀಡಲಾಗಿದೆ ಎಂದರು.