ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಸಿಎಂ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕೃಷಿ ಕ್ಷೇತ್ರ ಹೊರತು ಪಡಿಸಿ ಇತರ ಎಲ್ಲಾ ಉತ್ಪಾದಕ ಕ್ಷೇತ್ರಗಳಲ್ಲಿಯೂ ಉತ್ಪಾದಕನೇ ತನ್ನ ವಸ್ತುವಿನ ಬೆಲೆ ನಿಗದಿ ಪಡಿಸುತ್ತಾನೆ. ಆದರೆ, ರೈತರು ಮಾತ್ರ ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಪಡಿಸುವ ವ್ಯವಸ್ತೆ ರೂಪುಗೊಂಡಿಲ್ಲ ಬೇಸರ ವ್ಯಕ್ತಪಡಿಸಿದರು.ಜನರಿಗೆ ಉತ್ತಮ ಜೀವನ ಕಲ್ಪಿಸುವ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ. ಪಟ್ಟಣದ ಕಸಬಾ ಪತ್ತಿನ ಸಹಕಾರ ಸಂಘ ಕಳೆದ 50 ವರ್ಷಗಳಿಂದ ಈ ಭಾಗದ ರೈತಾಪಿ ಜನರಿಗೆ ಸೇವೆ ನೀಡುತ್ತಿದೆ. ಈ ಸಹಕಾರ ಸಂಘ ಸ್ವಂತ ಕಟ್ಟಡ ಹೊಂದಲು ಅಗತ್ಯ ನಿವೇಶನಗಳನ್ನು ನೀಡಿದ ದಿ.ಕೆ.ಎನ್.ಕೆಂಗೇಗೌಡರ ಹೆಸರಿನಲ್ಲಿ ಸಭಾ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮಗಾಗಿ ಎಲ್ಲರೂ, ಎಲ್ಲರಿಗಾಗಿ ನಾವು ಎನ್ನುವುದು ನಮ್ಮ ಸಹಕಾರ ತತ್ವದ ಮೂಲ ಧ್ಯೇಯ. ರೈತರು ಆರ್ಥಿಕವಾಗಿ ಸಧೃಡರಾಗಲು, ಸ್ವಾಭಿಮಾನದ ಬದುಕು ಸಾಗಿಸಲು ಸಹಕಾರ ಸಂಘ ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಜನರ ಅರ್ಥಿಕ ಚಟುವಟಿಕೆ ಹೆಚ್ಚಿಸುವ ಕಾರಣಕ್ಕಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ ಹೈನುಗಾರಿಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದರು.ಸಹಕಾರ ಸಂಘಗಳು ಜಾತಿ ಮತ್ತು ಧರ್ಮಗಳಿಂದ ದೂರವಿರಬೇಕು. ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಂಘಗಳ ಸದಸ್ಯತ್ವ ಪಡೆಯಬೇಕು. ಸವಲತ್ತು ಪಡೆಯದವರನ್ನು ಗುರುತಿಸಿ ಸಹಕಾರ ಸಂಘಗಳು ಸಾಲ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ರೈತ ಸಮುದಾಯಕ್ಕೆ ನೀಡಬೇಕು ಎಂದರು.
ಇದೇ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ತಾಲೂಕಿನ ಜನತೆಯ ಪರವಾಗಿ ಬೇಡಿಕೆ ಪಟ್ಟಿ ಸಲ್ಲಿಸಿದರು.