ಲಂಚ ಪಡೆದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಶಿಕ್ಷೆ

KannadaprabhaNewsNetwork |  
Published : Jun 11, 2024, 01:32 AM IST
ಶಿಕ್ಷೆ | Kannada Prabha

ಸಾರಾಂಶ

ಲಂಚ ಪಡೆದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಕಾರವಾರದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಕಾರವಾರ: ಇಲ್ಲಿನ ಕರಾವಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಿಂದ ಹೆಸರನ್ನು ಕೈ ಬಿಡುವ ಸಂಬಂಧ ಲಂಚ ಪಡೆದಿದ್ದ ಕರಾವಳಿ ಕಾವಲು ಪಡೆಯ ಸಿಪಿಸಿ ಉದಯ ಸೀತಾರಾಮ ಪಡ್ತಿ ಅವರಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988ರ ಕಲಂ 7ರಡಿ 1 ವರ್ಷದ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ಹಾಗೂ ₹ 5,000 ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ ಕಲಂ 13(2)ರ ಅಡಿಯಲ್ಲಿ 2 ವರ್ಷಗಳ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣ ಹಿನ್ನೆಲೆ: ಗೋವಾ ಕಾಣಕೋಣದ ವೀರೇಂದ್ರ ವಿನಾಯಕ ನಾಯ್ಕ ವಿರುದ್ಧ ಇಲ್ಲಿನ ಕರಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಅವರ ಮನೆಯ ಮುಂದೆ ನಿಲ್ಲಿಸಿದ್ದ ಅವರ ತಮ್ಮ ವಿಶಾಲ ನಾಯ್ಕ ಅವರ ಮಾಲೀಕತ್ವದ ಜೀಪ್‌ನ್ನು ಕರಾವಳಿ ಪೊಲೀಸ್ ಠಾಣೆಯ ಪೊಲೀಸರು ಜಪ್ತು ಮಾಡಿ, ವಾಹನದ ಮಾಲೀಕರಾದ ವಿಶಾಲ ನಾಯ್ಕ ಅವರನ್ನು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ದೂರುದಾರರು ಸಿಪಿಸಿ ಉದಯ ಪಡ್ತಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಈ ವೇಳೆ ₹ 25,000 ಹಣ ನೀಡಿದರೆ ಪೊಲೀಸ್ ನಿರೀಕ್ಷಕರಿಗೆ ಹೇಳಿ ವಿಶಾಲ ನಾಯ್ಕ ಅವರನ್ನು ಪ್ರಕರಣದಿಂದ ಕೈ ಬಿಡುವುದಾಗಿ ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರಿಂದ ಲಂಚ ಪಡೆಯುವಾಗ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು.

ಉದಯ ವಿರುದ್ಧ ವಿಶೇಷ ಮತ್ತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಕೆಯಾಗಿತ್ತು.

ವಿಚಾರಣೆ ನಡೆಸಿದ ವಿಶೇಷ ಮತ್ತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ