ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಪುಟ ದರ್ಜೆಯ ಸಚಿವ ಕುಮಾರಸ್ವಾಮಿ ಅವರಿಗೆ ಭಾರಿ ಕೈಗಾರಿಕೆ ಮತ್ತು ಉಕ್ಕು ನೀಡಿರುವುದು ರಾಜ್ಯದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಲು ಅನುಕೂಲವಾಗಬಹುದು. ಹೆಚ್ಚಿನ ಬಂಡವಾಳ ಹರಿದುಬರುವ ನಿರೀಕ್ಷೆ ಹೊಂದಬಹುದು. ಮತ್ತೊಬ್ಬ ಸಂಪುಟ ದರ್ಜೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ. ಈ ಪೈಕಿ ನವೀಕರಿಸಬಹುದಾದ ಇಂಧನ ಖಾತೆಯಿಂದ ರಾಜ್ಯದಲ್ಲಿ ಹೂಡಿಕೆಗೆ ಪ್ರೋತ್ಸಾಹ ಸಿಗಬಹುದು.ಇನ್ನು ರಾಜ್ಯ ದರ್ಜೆಯ ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ, ಉದ್ಯೋಗ ಖಾತೆಗಳು ಲಭಿಸಿವೆ. ಈ ಪೈಕಿ ರಾಜ್ಯದ ಸಣ್ಣ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲವನ್ನು ನಿರೀಕ್ಷಿಸಬಹುದಾಗಿದೆ. ಅದೇ ರೀತಿ ರಾಜ್ಯ ದರ್ಜೆಯ ಸೋಮಣ್ಣ ಅವರಿಗೆ ಜಲಶಕ್ತಿ ಮತ್ತು ರೈಲ್ವೆ ಖಾತೆಗಳು ಸಿಕ್ಕಿವೆ. ಸೋಮಣ್ಣ ಅವರ ಖಾತೆಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಸಿಗುವ ಸಾಧ್ಯತೆಯಿದೆ. ಜಲವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ ಸಿಗಬಹುದು. ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ತ್ವರಿತ ವೇಗ ನೀಡಲು ನೆರವಾಗುವ ಸಂಭವವಿದೆ.ಕುಮಾರಸ್ವಾಮಿ ಮತ್ತು ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿರುವುದರಿಂದ ಅವರ ಖಾತೆಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇರುವುದರಿಂದ ರಾಜ್ಯಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳುವಾಗ ಹೆಚ್ಚಿನ ಅಧಿಕಾರ ಇರಲಿದೆ. ಆದರೆ, ರಾಜ್ಯ ಖಾತೆ ಹೊಂದಿರುವ ಶೋಭಾ ಮತ್ತು ಸೋಮಣ್ಣ ಅವರಿಗೆ ಆ ಮಟ್ಟದ ಸ್ವಾತಂತ್ರ್ಯ ಸಿಗದೇ ಇರಬಹುದು. ಆದರೆ, ಸಚಿವರು ಮನಸ್ಸು ಮಾಡಿ ಬೆನ್ನು ಹತ್ತಿದರೆ ಅಸಾಧ್ಯವೇನೂ ಅಲ್ಲ.
ಒಳ್ಳೆಯ ಕೆಲಸ ಮಾಡಲು ಅವಕಾಶ ಇದೆ: ಸೋಮಣ್ಣಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವರಾಗಿ ಒಳ್ಳೆಯ ಕೆಲಸ ಮಾಡಲು ಅವಕಾಶ ಇದೆ. ಎಲ್ಲವನ್ನೂ ಅಧ್ಯಯನ ಮಾಡುತ್ತೇನೆ ಎಂದು ಕೇಂದ್ರದ ನೂತನ ಸಚಿವ ವಿ.ಸೋಮಣ್ಣ ತಿಳಿಸಿದರು.
ಮೋದಿ ಅವರು ನನಗೆ ಹೊಸ ಜವಾಬ್ದಾರಿ ನೀಡಿದ್ದಾರೆ. ಇದಕ್ಕೆ ನಾನು ಆಭಾರಿಯಾಗಿದ್ದೇನೆ. ಎಲ್ಲಾ ರಾಜ್ಯಗಳಲ್ಲೂ ತನ್ನದೇ ಆದ ಸಮಸ್ಯೆ ಇದೆ. ಎಲ್ಲವನ್ನೂ ಅಧ್ಯಯನ ಮಾಡುತ್ತೇನೆ ಎಂದರು.