ಕರಾವಳಿ: ಮುಂಗಾರು ಮಳೆ ಬಿರುಸು, ವ್ಯಕ್ತಿ ಬಲಿ

KannadaprabhaNewsNetwork | Updated : Jun 10 2024, 11:04 AM IST

ಸಾರಾಂಶ

ಕರಾವಳಿಯಲ್ಲಿ ಜೂ.12ರಂದು ಆರೆಂಜ್‌, ಜೂ.13 ಮತ್ತು 14ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

 ಮಂಗಳೂರು/ಉಡುಪಿ :  ಕರಾವಳಿಯಲ್ಲಿ ಭಾನುವಾರ ಅಪರಾಹ್ನದಿಂದ ಮುಂಗಾರು ಮಳೆ ವೇಗ ಪಡೆದುಕೊಂಡಿದೆ. ಭಾರತೀಯ ಹವಾಮಾನ ಇಲಾಖೆ ಜೂನ್‌ 10 ಮತ್ತು 11ರಂದು ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದು, ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಶನಿವಾರ ಬೀಸಿದ ಗಾಳಿಗೆ ಮರ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ನಡೆದಿದೆ.

ದ.ಕ.ಜಿಲ್ಲೆಯಲ್ಲಿ ಭಾನುವಾರ ನಸುಕಿನ ಜಾವ ಗ್ರಾಮೀಣ ಭಾಗದಲ್ಲಿ ಒಂದಷ್ಟು ಮಳೆ ಸುರಿದಿತ್ತು. ಅದನ್ನು ಹೊರತುಪಡಿಸಿದರೆ, ಮಧ್ಯಾಹ್ನ ವರೆಗೆ ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮೋಡ, ಬಿಸಿಲು, ತುಂತುರು ಮಳೆ ಕಾಣಿಸಿತ್ತು. ಅಪರಾಹ್ನದಿಂದ ಗುಡುಗು ಸಹಿತ ಮಳೆ ಆರಂಭವಾಗಿತ್ತು. ಧಾರಾಕಾರ ಮಳೆಗೆ ಕಲ್ಲಡ್ಕದಲ್ಲಿ ಮತ್ತೆ ರಸ್ತೆ ಕೆಸರುಮಯವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.ಕರಾವಳಿಯಲ್ಲಿ ಜೂ.12ರಂದು ಆರೆಂಜ್‌, ಜೂ.13 ಮತ್ತು 14ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಉಡುಪಿ ವರದಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ದಿನವಿಡೀ ಐದಾರು ಬಾರಿ ಜೋರಾದ ಮಳೆಯಾಗಿದ್ದು, ಒಂದೆಡು ಬಾರಿ ವಿಪರೀತ ಗಾಳಿಯೂ ಬೀಸಿದೆ. ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಭಾರೀ ಮಳೆಯಾಗಿದ್ದು, ನದಿಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಶನಿವಾರ ರಾತ್ರಿಯೂ ವಿಪರೀತ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸುಮಾರು 17 ಮನೆಗಳಿಗೆ ಗಾಳಿಮಳೆ ಮತ್ತು ಮರಗಳು ಬಿದ್ದು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಕಸ್ಬಾ ಗ್ರಾಮದ ಲಕ್ಷ್ಮೀ ದೇವಾಡಿಗ ಅವರ ಮನೆಗೆ 25,000 ರು., ಗುಜ್ಜಾಡಿ ಗ್ರಾಮದ ಮುತ್ತು ಅವರ ಮನೆಗೆ 50,000 ರು., ಶಂಕರನಾರಾಯಣ ಗ್ರಾಮದ ಶಕುಂತಲಾ ಶೆಡ್ತಿ ಅವರ ಮನೆಗೆ 15,000 ರ., ಹೊಸಂಗಡಿ ಗ್ರಾಮದ ಜ್ಯೋತಿ ಶ್ರೀಧರ ಅವರ ಮನೆಗೆ 8,000 ರು., ಕನ್ಯಾನ ಗ್ರಾಮದ ಶಿವರಾಮ ಅವರ ಮನೆ ಮೇಲೆ ಮರ ಬಿದ್ದು 10,000 ರು., ತೆಕ್ಕಟ್ಟೆ ಗ್ರಾಮದ ಲಕ್ಷ್ಮೀ ಬಾಲಕೃಷ್ಣ ಅವರ ಮನೆಗೆ 10,000 ರು., ಗಂಗೊಳ್ಳಿ ಗ್ರಾಮದ ಕೇಶವ ಶೇರಿಗಾರ ಅವರ ಮನೆಗೆ 50,000 ರು. ನಷ್ಟ ಉಂಟಾಗಿದೆ.ಕಾಪು ತಾಲೂಕಿನ ಕಳತ್ತೂರು ಗ್ರಾಮದ ರಾಮ ಶೆಟ್ಟಿಗಾರ್ ಅವರ ಮನೆಗೆ 30,000 ರು., ಮೂಡಬೆಟ್ಟು ಗ್ರಾಮದ ಯಾಕೂಬ್ ಬ್ಯಾರಿ ಅವರ ಮನೆಗೆ 40,000 ರು., ಹೆಜಮಾಡಿ ಗ್ರಾಮದ ಪ್ರಭಾಕರ ಸುವರ್ಣ ಅವರ ಮನೆಗೆ 35,000 ರು., ಉಡುಪಿ ತಾಲೂಕಿನ ಅಂಬಲಪಾಡಿಯ ಸುಗುಣ ಶೆಟ್ಟಿ ಅವರ ಮನೆಗೆ 40,000 ರು. ನಷ್ಟ ಅಂದಾಜಿಸಲಾಗಿದೆ.ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕೃಷ್ಣಮೂರ್ತಿ ಅವರ ಮನೆಗೆ 50,000 ರು., ಉಪ್ಪುಂದ ಗ್ರಾಮದ ಮಾಚ ದುರ್ಗ ಖಾರ್ವಿ ಅವರ ಮನೆಗೆ 34,000 ರು., ನಾರಾಯಣ ಪೂಜಾರಿ ಅವರ ಮನೆಗೆ 30,000 ರು., ಉಳ್ಳೂರು ಗ್ರಾಮದ ಜಗನ್ನಾಥ ಶೆಟ್ಟಿ ಅವರ ಮನೆಗೆ 80,000 ರು., ಬಿಜೂರು ಗ್ರಾಮದ ಗುಲಾಬಿ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು 20,000 ರು., ಉಪ್ಪುಂದ ಗ್ರಾಮದ ನಾಗರಾಜ ಭಟ್ ಇವರ ಮನೆ ಮೇಲೆ ಮರ ಬಿದ್ದು 1 ಲಕ್ಷ ರು. ನಷ್ಟವಾಗಿದೆ.ಭಾನುವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 84.4 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕ‍ಳ 65.6, ಕುಂದಾಪುರ 93.7, ಉಡುಪಿ 53.1, ಬೈಂದೂರು 113.0, ಬ್ರಹ್ಮಾವರ 89.8, ಕಾಪು 50.6, ಹೆಬ್ರಿ 69.4 ಮಿ.ಮೀ. ಮಳೆ ದಾಖಲಾಗಿದೆ.

ಉಳ್ಳಾಲ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 37.1 ಮಿಲಿ ಮೀಟರ್‌ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಮಳೆ 38 ಮಿ.ಮೀ. ಆಗಿದೆ. ಬೆಳ್ತಂಗಡಿ 23.4 ಮಿ.ಮೀ, ಬಂಟ್ವಾಳ 24.8 ಮಿ.ಮೀ, ಮಂಗಳೂರು 35.9 ಮಿ.ಮೀ, ಪುತ್ತೂರು 31 ಮಿ.ಮೀ, ಸುಳ್ಯ 20.7 ಮಿ.ಮೀ, ಮೂಡುಬಿದಿರೆ 29.9 ಮಿ.ಮೀ, ಕಡಬ 20.2 ಮಿ.ಮೀ. ಮಳೆ ದಾಖಲಾಗಿದೆ.

ಗಾಳಿ ಮಳೆ: ಕೃಷಿ ಬೆಳೆಗಳಿಗೆ ಹಾನಿ

ಉಪ್ಪಿನಂಗಡಿ: ಬಿರುಸುಗೊಂಡ ಮುಂಗಾರು ಮಳೆಯಿಂದಾಗಿ ಬೀಸಿದ ಬಿರುಗಾಳಿಗೆ ಶಿರಾಡಿ ಗ್ರಾಮದ ಕಡೆಂಬುರ ಎಂಬಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.

ಕಡೆಂಬುರ ನಿವಾಸಿ ವೆಂಕಟರಮಣ ಗೌಡ ಎಂಬವರ ತೋಟದಲ್ಲಿ ಬಿರುಗಾಳಿ ಭಾರಿ ಹಾನಿಯನ್ನುಂಟು ಮಾಡಿದ್ದು, ನೂರಕ್ಕೂ ಮಿಕ್ಕಿದ ಅಡಕೆ ಮರಗಳು ತುಂಡರಿಸಲ್ಪಟ್ಟಿದೆ. ಅಡಕೆ ಒಣಗಿಸಲೆಂದು ಮಾಡಿರುವ ಸೋಲಾರ್ ಗೂಡು ಸಿಸ್ಟಮ್ ಸಂಪೂರ್ಣ ದ್ವಂಸಗೊಂಡಿದೆ. ಘಟನೆಯಿಂದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ನಷ್ಟ ಉಂಟಾಗಿದೆ.ಪರಿಸರದ ಹಲವೆಡೆ ಇದೇ ರೀತಿ ಹಾನಿಯುಂಟಾದ ಬಗ್ಗೆ ಮಾಹಿತಿ ಬಂದಿದ್ದು, ಘಟನಾ ಸ್ಥಳಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದು, ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Share this article