ಎಸ್‌ಪಿಬಿ ಹಾಡುಗಳಿಂದ ಮನಸ್ಸಿಗೆ ನೆಮ್ಮದಿ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಈ.ಕೃಷ್ಣೇಗೌಡ

KannadaprabhaNewsNetwork | Published : Jun 10, 2024 12:51 AM

ಸಾರಾಂಶ

ಎಸ್.ಪಿ. ಬಾಲಸುಬ್ರಮಣ್ಯ ಮತ್ತು ಡಾ.ರಾಜ್‌ಕುಮಾರ್ ಅವರ ಹಾಡನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ತಿಳಿಸಿದರು. ಹಾಸನದಲ್ಲಿ ನಡೆದ ಎಸ್‌.ಪಿ.ಬಾಲಸುಬ್ರಮಣ್ಯ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಯಕ ಬಾಲಸುಬ್ರಮಣ್ಯ ಜನ್ಮದಿನ ಆಚರಣೆ

ಕನ್ನಡಪ್ರಭ ವಾರ್ತೆ ಹಾಸನ

ಯುವಕರು ಕೇವಲ ಮೊಬೈಲ್ ಮತ್ತು ಟಿವಿಯಲ್ಲಿ ಮುಳುಗದೇ ಕಲೆ ಉಳಿಸುವ ಕೆಲಸ ಮಾಡಬೇಕು. ಹಿರಿಯ ಗಾಯಕರಾದ ಎಸ್.ಪಿ. ಬಾಲಸುಬ್ರಮಣ್ಯ ಮತ್ತು ಡಾ.ರಾಜ್‌ಕುಮಾರ್ ಅವರ ಹಾಡನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ಎಸ್‌.ಪಿ.ಬಾಲಸುಬ್ರಮಣ್ಯ ಜನ್ಮ ದಿನದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಜನತೆ ಟಿವಿ, ಮೊಬೈಲ್‌ನಲ್ಲೆ ಮುಳುಗಿ ಅವರದೇ ಲೋಕದಲ್ಲಿ ಕಳೆದು ಹೋಗಿದ್ದಾರೆ. ಆಧುನಿಕ ಜಗತ್ತಿನ ಭರಾಟೆಯಲ್ಲಿ ಕಲೆ ಉಳಿಸುವ ಕೆಲಸ ಆಗಬೇಕಿದೆ. ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಮಣ್ಯ ಮತ್ತು ಡಾ.ರಾಜಕುಮಾರ್ ಅವರ ಗಾಯನ ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕಲಾವಿದರು ಇರುವ ಈ ನಾಡಿನಲ್ಲಿ ಇವರ ನೆನೆಯುವ ಕೆಲಸವನ್ನು ಈ ವೇದಿಕೆ ಮಾಡಿಕೊಂಡು ಬರುತ್ತಿದೆ.

ಬಡ ಕಲಾವಿದರಿಗೆ ಇಂತಹ ವೇದಿಕೆ ಮೂಲಕ ಒಳ್ಳೆ ಅವಕಾಶ ಸಿಗಬೇಕು. ಹಾಸನ ಜಿಲ್ಲೆಯಲ್ಲೂ ಇರುವ ಕಲಾವಿದರಿಗೆ ಒಳ್ಳೆಯ ಅವಕಾಶ ಸಿಗಬೇಕು. ಉತ್ತಮ ಕಲಾವಿದರನ್ನು ಗುರುತಿಸುವ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಜೈಭೀಮ್ ಬ್ರಿಗೇಡ್ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್ ಮಾತನಾಡಿ, ಎಸ್.ಪಿ. ಬಾಲಸುಬ್ರಮಣ್ಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ವತಿಯಿಂದ ಮತ್ತು ರಾಜ್ಯ ಸರ್ಕಾರದಿಂದಲೂ ಆಚರಿಸಬೇಕು. ಬಾಲಸುಬ್ರಮಣ್ಯ ಅವರು ಲಕ್ಷಾಂತರ ಹಾಡನ್ನು ಹಾಡಿದ್ದು, ಆದರೆ ಸರ್ಕಾರದಿಂದ ಅವರಿಗೆ ಯಾವ ಗೌರವವನ್ನು ಸಲ್ಲಿಸುತ್ತಿಲ್ಲ ಎಂದು ವಿಷಾದಿಸಿದರು.

ಹೆಸರಾಂತ ಗಾಯಕ ಬಾಲಸುಬ್ರಮಣ್ಯ ಜನ್ಮದಿನವನ್ನು ಕಲಾವಿದರ ಸಂಘದ ಅಧ್ಯಕ್ಷ ಕುಮಾರ್ ಬಿಟ್ಟರೆ ಯಾವ ನಾಯಕರು ಕೂಡ ಆಚರಿಸುತ್ತಿಲ್ಲ. ಕಲೆ ತಿಳಿದಿರುವ ಮತ್ತು ಸಾಹಿತ್ಯದ ಅರಿವು ಇರುವ ಪ್ರಾಮಾಣಿಕರಿಗೆ ಒಂದು ಸನ್ಮಾನ ಕೂಡ ನಡೆಯುತ್ತಿಲ್ಲ. ಇಂತಹ ಕಲೆಯನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಗುರುತಿಸುತ್ತಿಲ್ಲ. ಲತಾ ಮಂಗೇಶ್ವರ್ ಬಿಟ್ಟರೆ ಉತ್ತಮ ಗಾಯಕರಾಗಿ ಎಸ್.ಪಿ.ಬಿ ಆ ಸಾಲಿಗೆ ಸೇರುತ್ತಾರೆ. ವಿಶೇಷವಾಗಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರವು ಗಮನಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಲಸುಬ್ರಮಣ್ಯ ಬಗ್ಗೆ ವಿಶೇಷವಾಗಿ ಪರಿಗಣನೆಗೆ ತೆಗೆದುಕೊಂಡು ಕೊನೆಯದಾಗಿ ಕರ್ನಾಟಕ ರತ್ನ ಪ್ರಶಸ್ತಿಯಾದರೂ ಕೊಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕುಮಾರ್, ಸಮಾಜ ಸೇವಕ ವಿಜಯಕುಮಾರ್. ಮಾಹಂತೇಶ್, ಜೈ ಭೀಮ್ ಬ್ರಿಗೇಡ್ ಸಂಘಟನಾ ಸಮಿತಿಯ ಕಾರ್ಯಧ್ಯಕ್ಷ ಚಂದ್ರಶೇಖರ್ ಗಾಯಕಿ ಅಂಜಲಿ, ಮುಸ್ತಾಫಾ, ಅನ್ನಪೂರ್ಣ, ನೀತು, ಜಯರಾಮ್ ಸೇರಿ ಹಲವಾರು ಗಾಯಕರು ಹಾಜರಿದ್ದರು.

Share this article