ಕರಾವಳಿ, ಮಲೆನಾಡಲ್ಲಿ ಉಕ್ಕಿದ ನದಿಗಳು, ಪ್ರವಾಹ

KannadaprabhaNewsNetwork |  
Published : Jul 17, 2024, 12:45 AM IST

ಸಾರಾಂಶ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡ್ಮೂರು ದಿನಗಳಿಂದ ಕಾಣಿಸಿಕೊಂಡಿರುವ ಮುಂಗಾರು ಮಳೆಯಬ್ಬರ ಮಂಗಳವಾರವೂ ಮುಂದುವರಿದಿದೆ. ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳ‍ಾಂತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡ್ಮೂರು ದಿನಗಳಿಂದ ಕಾಣಿಸಿಕೊಂಡಿರುವ ಮುಂಗಾರು ಮಳೆಯಬ್ಬರ ಮಂಗಳವಾರವೂ ಮುಂದುವರಿದಿದೆ. ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳ‍ಾಂತರಿಸಲಾಗಿದೆ. ಇನ್ನು ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣ ತುಂಗಾ ಪ್ರವಾಹದಿಂದಾಗಿ ಜಲದಿಗ್ಬಂಧನಕ್ಕೊಳಗಾಗಿದೆ.

ಮಳೆಯ ನಡುವೆಯೇ ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಹಲವೆಡೆ ಗುಡ್ಡಕುಸಿತದ ಪ್ರಕರಣಗಳೂ ಸಂಭವಿಸಿ, ಆತಂಕ ಸೃಷ್ಟಿಸಿದೆ. ಮಡಿಕೇರಿಯಲ್ಲಿ ಶಾಲೆಯೊಂದರ ಮೇಲೆ ಗುಡ್ಡಕುಸಿದು ಹಾನಿಯಾಗಿದ್ದರೆ, ಕಾರವಾರದಲ್ಲಿ ಮನೆಯೊಂದರ ಮೇಲೆ ಗುಡ್ಡಕುಸಿದು ಅವಶೇಷಗಳಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಉತ್ತರ ಕನ್ನಡ ತತ್ತರ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಗಂಗಾವಳಿ ಸೇರಿ ಹಲವು ನದಿಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಪ್ರಮುಖ ರಸ್ತೆಗಳೆಲ್ಲವೂ ಬಂದ್‌ ಆಗಿ ಜಿಲ್ಲೆಯ ಕರಾವಳಿ ಭಾಗ ಅಕ್ಷರಶಃ ದ್ವೀಪದಂತಾಗಿದೆ. ಕರಾವಳಿಯ ಐದೂ ತಾಲೂಕುಗಳಲ್ಲಿ ಬಹುತೇಕ ಕಡೆ ಜಲಾವೃತ ಪರಿಸ್ಥಿತಿ ಇದ್ದು, ಜನ ಮನೆಯಿಂದ ಹೊರಬರಲಾಗದಂಥ ಸ್ಥಿತಿ ನಿರ್ಮಾಣವಾಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತ: ಭಾರೀ ಮಳೆಗೆ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ವ್ಯಾಪಕ ಹಾನಿ ಆಗಿದೆ. ಅಂಕೋಲಾ ಬಳಿ ಶಿರೂರಿನಲ್ಲಿ ಕಾರವಾರ-ಮಂಗಳೂರು ಚತುಷ್ಪಥ ಹೆದ್ದಾರಿ, ಕುಮಟಾ-ಹುಬ್ಬಳ್ಳಿ ಹೆದ್ದಾರಿಯ ರಾಗಿಹೊಸಳ್ಳಿ ಬಳಿ, ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ವರ್ನಕೆರೆ ಬಳಿ, ಕಾರವಾರ-ಇಳಕಲ್ ಹೆದ್ದಾರಿಯಲ್ಲಿ ಕಡವಾಡ ಮಂದ್ರಾಳಿ ಬಳಿ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಕಾರವಾರ-ಅಂಕೋಲಾ ನಡುವೆ ಅರಗಾ, ಚೆಂಡಿಯಾ ಹಾಗೂ ಅಮದಳ್ಳಿ ಬಳಿ ಚತುಷ್ಪಥ ಹೆದ್ದಾರಿ ಮೇಲೆ ನೀರು ನುಗ್ಗಿ ಸಂಚಾರ ಸ್ಥಗಿತಗೊಂಡಿದೆ.ಜಿಲ್ಲೆಯ ಪ್ರಮುಖ ನದಿಗಳಾದ ಅಘನಾಶಿನಿ, ಗಂಗಾವಳಿ, ಗುಂಡಬಾಳ, ಚಂಡಿಕಾ, ಭಾಸ್ಕೇರಿ, ಬಡಗಣಿ ಮತ್ತಿತರ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿ ಇಕ್ಕೆಲಗಳಲ್ಲಿ ಮನೆಗಳು ಜಲಾವೃತವಾಗಿವೆ. ಜಿಲ್ಲೆಯಲ್ಲಿ ಮಂಗಳವಾರ ಸಂಜೆ ವೇಳೆಗೆ ಕಾರವಾರ ತಾಲೂಕಿನಲ್ಲಿ 6, ಕುಮಟಾ ತಾಲೂಕಿನಲ್ಲಿ 6 ಮತ್ತು ಹೊನ್ನಾವರ ತಾಲೂಕಿನಲ್ಲಿ 14 ಸೇರಿ ಒಟ್ಟು 26 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಇವುಗಳಲ್ಲಿ 2,368 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಶೃಂಗೇರಿಯಲ್ಲಿ ಜಲದಿಗ್ಬಂಧನ: ತುಂಗಾ ನಂದಿ ಪ್ರವಾಹಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಜಲದಿಗ್ಬಂಧನಕ್ಕೊಳಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಾ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ ಮುಳುಗಡೆಯಾಗಿ, ಸಂಧ್ಯಾವಂದನ ಮಂಟಪವೂ ಪ್ರವಾಹದಲ್ಲಿ ಜಲಾವೃತವಾಗಿದೆ. ಶೃಂಗೇರಿ ಮಠ-ನರಸಿಂಹವನದ ದಾರಿ ಹಾಗೂ ಭೋಜನ ಶಾಲೆ, ಅದೇ ರೀತಿ ಪಟ್ಟಣದ ಜನನಿಬಿಡ ಕುರುಬಗೇರಿ ಬಡಾವಣೆಯ ಮನೆ, ಅಂಗಡಿ, ಹೋಟೇಲ್‌, ಮಳಿಗೆಗಳಿಗೂ ನೀರು ನುಗ್ಗಿದೆ. ಇನ್ನು ಶೃಂಗೇರಿ-ಕಿಗ್ಗಾ-ಸಿರಿಮನೆ ಹಾಗೂ ಶೃಂಗೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಮೀಪ ತುಂಗಾ ನದಿ ನೀರು ನುಗ್ಗಿ ರಸ್ತೆ ಸಂಚಾರ ಕಡಿತಗೊಂಡಿದೆ. ಇನ್ನು ಕೊಪ್ಪ-ಚಿಕ್ಕಮಗಳೂರು ರಸ್ತೆಯಲ್ಲಿರುವ ನಾರ್ವೆ ಬಳಿ, ಮುಳ್ಳಯ್ಯನಗಿರಿ ರಸ್ತೆಯ ನಾಲ್ಕೈದು ಕಡೆ ಧರೆ ಕುಸಿತಗೊಂಡಿದೆ.100ಕ್ಕೂ ಹೆಚ್ಚು ಮನೆಗೆ ನೀರು: ಉಡುಪಿ ಜಿಲ್ಲೆಯಲ್ಲಿ ಸೌಪರ್ಣಿಕಾ ಮತ್ತು ಸೀತಾ ನದಿ ತೀರದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಸೌಪರ್ಣಿಕಾ ನದಿ ತೀರದ ನಾವುಂದ, ನಾಡ, ಮರವಂತೆ, ಪಡುಕೋಣೆ, ಹಡವು ಗ್ರಾಮಗಳು ಜಲಾವೃತಗೊಂಡಿವೆ. ಈ ಭಾಗದಲ್ಲಿ 10 ದಿನದಲ್ಲಿ ನೆರೆ ನೀರು ನುಗ್ಗುತ್ತಿರುವುದು ಇದು ಎರಡನೇ ಬಾರಿ. ಸಾಲ್ಬುಡ, ಅರೆಹೊಳೆ, ಮರವಂತೆ-ಪಡುಕೋಣೆ ಸಂಪರ್ಕ ರಸ್ತೆಯೇ ಸಂಪೂರ್ಣ ಮುಳುಗಡೆಯಾಗಿದೆ. ಹೆಬ್ರಿ ಮತ್ತು ಬ್ರಹ್ಮಾವರ ಸುತ್ತಮುತ್ತ ಸೀತಾನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದೆ. ನದಿ ತೀರದಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.ಕೊಯನಾಡು ಶಾಲೆ ಮೇಲೆ ಗುಡ್ಡು ಕುಸಿದು ಹಾನಿ:ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಸಂಪಾಳೆ ಸಮೀಪದ ಕೊಡಗು ಜಿಲ್ಲೆ ವ್ಯಾಪ್ತಿಯ ಕೊಯನಾಡು ಶಾಲೆಯ ಹಿಂಬದಿಯ ಗುಡ್ಡ ಜರಿದು ಶಾಲೆಯ ಮೇಲೆ ಬಿದ್ದಿದ್ದು, ಕಟ್ಟಡಕ್ಕೆ ಸ್ವಲ್ಪ ಹಾನಿಯಾಗಿದೆ. ಈ ಶಾಲೆ ಮಕ್ಕಳಿಗೆ ಪಕ್ಕದ ಸಂಪಾಜೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಇಲಾಖೆ ನಿರ್ಧರಿಸಿದೆ. ಜತೆಗೆ, ಮುಂದಿನ ಮುಂದಿನ ಮೂರು ತಿಂಗಳು ಶಾಲೆ ಮುಚ್ಚಲು ನಿರ್ಧರಿಸಿದೆ. ಮದೆನಾಡು ಬಳಿ ರಸ್ತೆಯಲ್ಲಿ ಬಿರುಕು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿಯ ಮದೆನಾಡಿನಲ್ಲಿ ಮುಖ್ಯರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಬದಿಯ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ವಾಹನ ಸವಾರರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅದೇ ರೀತಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿ ಪಕ್ಕದಲ್ಲಿ ಹಾಕಿದ್ದ ತಡೆಗೋಡೆ ಕುಸಿತಗೊಂಡು ಮತ್ತಷ್ಟು ಗುಡ್ಡಕುಸಿತದ ಆತಂಕ ಮನೆಮಾಡಿದೆ.ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ:ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ಪ್ರವಾಹದ ನೀರಿನಲ್ಲಿ ಆನೆ ಮೃತದೇಹ ತೇಲಿಬಂದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಆನೆ ಕೆಲ ದಿನಗಳ ಹಿಂದೆಯೇ ಎಲ್ಲೋ ಮೃತಪಟ್ಟಿದ್ದು, ಇದೀಗ ನದಿಯಲ್ಲಿ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಆನೆ ಮೃತದೇಹ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಹುಡುಕಾಟ ಮುಂದುವರಿದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಸಿಎಂ ರಾಜೀನಾಮೆ - ಇಂದೇ ಸುದ್ದಿಗೋಷ್ಠಿಯಲ್ಲಿ ವಿದಾಯ ಭಾಷಣ ಸಾಧ್ಯತೆ?
ಇದೀಗ ಮೌನಕ್ಕೆ ಶರಣಾದ ಸಿಎಂ! ಸಿದ್ದು ರಹಸ್ಯ ನಡೆ ಅರಿಯದಾದ ಕಾಂಗ್ರೆಸ್‌ ಹೈಕಮಾಂಡ್‌