ರಿಯಾಜಅಹ್ಮದ ಎಂ. ದೊಡ್ಡಮನಿ
ಕೆಲ ತಿಂಗಳ ಹಿಂದೆ ₹20 ರಿಂದ ₹30 ಬೆಲೆ ಇದ್ದ ತೆಂಗಿನಕಾಯಿ ಬೆಲೆ ಇದೀಗ ₹50 ರಿಂದ ₹60ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ದರ ದುಪ್ಪಟ್ಟಾಗಿದ್ದು, ಗ್ರಾಹಕರನ್ನು ಕಂಗೆಡಿಸಿದೆ.
ಗದಗ ಜಿಲ್ಲೆ ಸೇರಿದಂತೆ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲೂ ತೆಂಗಿನಕಾಯಿ ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ವಾರ ನಡೆಯುವ ಸಂತೆಯಲ್ಲಿ ಈ ಹಿಂದೆ ಸಾಮಾನ್ಯವಾಗಿ ಒಂದು ತೆಂಗಿನಕಾಯಿಗೆ ಕನಿಷ್ಠ ₹10ರಿಂದ ಗರಿಷ್ಠ ₹20 ಅಥವಾ ₹25ರ ವರೆಗೆ ದರ ಇರುತ್ತಿತ್ತು. ಆದರೆ, ಈಗ ಉತ್ತಮ ಗಾತ್ರದ ತೆಂಗಿನಕಾಯಿ ಬೆಲೆ ₹40 ಆಗಿದೆ.ಮುಂಡರಗಿ ತಾಲೂಕಿನಲ್ಲಿ ಅತಿ ಹೆಚ್ಚು ತೆಂಗಿನಕಾಯಿ ಬೆಳೆಯುವ ಗ್ರಾಮಗಳೆಂದರೆ ಮುಂಡರಗಿ, ಪೇಠಾ ಆಲೂರ, ಬರದೂರ, ಡಂಬಳ, ಸಿಂಗಟಾಲೂರ, ಡೋಣಿ, ಡೋಣಿ ತಾಂಡ, ಅತ್ತಿಕಟ್ಟಿ ತಾಂಡಗಳಾಗಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಮರಗಳಿದ್ದು, ಬೆಲೆ ಏರಿಕೆ ಬೆಳೆಗಾರರಿಗೆ ಹರ್ಷವನ್ನುಂಟು ಮಾಡಿದೆ.
ಆಂಧ್ರಪ್ರದೇಶ ಸೇರಿ ಬೇರೆ ಬೇರೆ ರಾಜ್ಯಗಳಿಂದ ಮತ್ತು ರಾಜ್ಯದ ಗಡಿಭಾಗಗಳಿಂದ ಆವಕವಾಗುತ್ತಿದ್ದ ತೆಂಗಿನಕಾಯಿ ದಿನೆ ದಿನೇ ಕಡಿಮೆ ಆಗುತ್ತಿರುವ ಕಾರಣ ಮತ್ತು ಅಲ್ಲಿಯೂ ಕೂಡಾ ತೆಂಗಿನ ಕಾಯಿ ಬೆಲೆ ಹೆಚ್ಚಳದಿಂದಾಗಿ ದರದಲ್ಲಿ ಏರಿಕೆಗೆ ಕಾರಣವಾಗಿದೆ.
ಎಳನೀರಿಗೆ ಬೇಡಿಕೆಯಿಂದ ರೈತರು ತೆಂಗಿನಕಾಯಿ ಆಗುವುದಕ್ಕೂ ಮುನ್ನ ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ತೆಂಗಿನಕಾಯಿಯ ಆವಕ ಕಡಿಮೆಯಾಗಿದ್ದು, ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.