ಶಿವಾನಂದ ಅಂಗಡಿಹುಬ್ಬಳ್ಳಿ:
ರಾಜ್ಯದ ಮಲೆಬೆನ್ನೂರು, ಕುಂದಾಪುರ, ಹೊನ್ನಾವರ, ಕಡೂರ, ಕುಮಟಾ, ತಿಪಟೂರ, ಅರಸಿಕೆರೆ, ತರಿಕೆರೆ, ತುಮಕೂರು ಹೀಗೆ ನಾನಾ ಕಡೆ ತೆಂಗಿನಕಾಯಿ ಮಾರುಕಟ್ಟೆ ಇದ್ದು, ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಸೇರಿದಂತೆ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಿಗೆ ಇಲ್ಲಿಂದಲೇ ತೆಂಗಿನಕಾಯಿ ರವಾನೆಯಾಗುತ್ತದೆ.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸಂತೆ ಮಾರುಕಟ್ಟೆಗಳಲ್ಲಿ ನೀವು ತೆಂಗಿನಕಾಯಿ ಬೆಲೆಗಳನ್ನು ಕೇಳಿದಾಗ ಗಾಬರಿಯಾಗಿರುತ್ತೀರಿ, ಯಾಕೆ ಇಷ್ಟು ದರ ಜಾಸ್ತಿಯಾಯಿತು ಎಂದು ವ್ಯಾಪಾರಸ್ಥರನ್ನು ವಿಚಾರಿಸಿರುತ್ತೀರಿ, ತೆಂಗಿನ ತೋಟಗಳಲ್ಲಿ ಈ ಬಾರಿ ಇಳುವರಿಯೇ ಜಾಸ್ತಿ ಬಂದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಮಾರಾಟಕ್ಕೆ ಹೋಗುತ್ತಿರುವುದರಿಂದ ತೆಂಗಿನಕಾಯಿ ಅಭಾವ ಉಂಟಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.ತೆಂಗಿನಕಾಯಿ ಮಾರುಕಟ್ಟೆಗಳಲ್ಲಿಯೇ ಕ್ವಿಂಟಲ್‌ಗೆ ಸಗಟು ಬೆಲೆ ₹5200 ರಿಂದ ₹5400 ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು ಸಗಟು ವ್ಯಾಪಾರಸ್ಥರಿಂದ ₹58ರಿಂದ ₹60 ಗೆ. ಖರೀದಿಸುತ್ತಾರೆ.
ಕಳೆದ ವರ್ಷ ಕಿಲೋಗೆ ₹35 ಮಾತ್ರ ಇತ್ತು. ಈ ಬಾರಿ ಇಳುವರಿ ಅಭಾವದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕಿಲೋಗೆ ₹ 20 ಹೆಚ್ಚಾಗಿದೆ. ಸಹಜವಾಗಿಯೇ ಚಿಲ್ಲರೇ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದ್ದು, ₹20 ಗೆ ಮಾರುತ್ತಿದ್ದ ಸಣ್ಣ ಕಾಯಿ ₹ 25, ಮಧ್ಯಮಗಾತ್ರದ ಕಾಯಿ ₹35ರಿಂದ ₹40, ದೊಡ್ಡಕಾಯಿ ₹50ರಿಂದ ₹60ಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಹೆಚ್ಚಳ ಭಾರವಾಗುತ್ತಿದೆ.
ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಸಗಟು ಮಾರಾಟದ 15ಕ್ಕೂ ಹೆಚ್ಚು ಅಂಗಡಿಗಳು ಇದ್ದು, ಪ್ರತಿಯೊಂದು ಅಂಗಡಿಗಳಿಗೆ ದಿನಾಲೂ 7 ಸಾವಿರ ತೆಂಗಿನಕಾಯಿ ತುಂಬಿದ ಒಂದೊಂದು ಲೋಡ್ ಬರುತ್ತವೆ. ಇಲ್ಲಿಂದಲೇ ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಹಳೆಹುಬ್ಬಳ್ಳಿ ಮಾರುಕಟ್ಟೆ, ತಾಲೂಕು ಕೇಂದ್ರಗಳು ಸೇರಿದಂತೆ ಸಂತೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡುವವರು ಖರೀದಿಸುತ್ತಾರೆ.
ಒಣಗೊಬ್ಬರಿ ಸಹ ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋ ₹240 ವರೆಗೂ ಮಾರಾಟವಾಗುತ್ತಿದೆ. ಶುದ್ಧ ಕೊಬ್ಬರಿ ಎಣ್ಣಿ ಕಳೆದ ಬಾರಿ ಲೀಟರ್‌ಗೆ ₹200 ಇತ್ತು. ಈ ಬಾರಿ ₹250 ಗೆ. ಲೀಟರ್ ಮಾರಾಟವಾಗುತ್ತಿದ್ದು, ₹50 ಬೆಲೆ ಹೆಚ್ಚಳವಾಗಿದೆ.
ತೆಂಗಿನಕಾಯಿ ಇಳುವರಿ ಈ ಬಾರಿ ಕಡಿಮೆ ಬಂದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿ ದರ ಜಾಸ್ತಿಯಾಗಿದೆ. ತೋಟಗಳಿಂದ ಎಳನೀರು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಹೋಗುತ್ತಿದ್ದು, ಎಳನೀರಿಗೆ ಉತ್ತಮ ಬೆಲೆ ದೊರೆಯುತ್ತಿದೆ ಹುಬ್ಬಳ್ಳಿ ಎಪಿಎಂಸಿ ಕಾಯಿ ವ್ಯಾಪಾರಸ್ಥ ಯೋಗೇಂದ್ರ ಎನ್. ದಫೇದಾರ ಹೇಳಿದರು.