ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ತಣಿಗೆಬೈಲು ವಲಯದ ವಿರೂಪಾಕ್ಷ ಖಾನ್ ಚೆಕ್ ಪೋಸ್ಟ್ ಕಚೇರಿಯನ್ನೇ ಅಲ್ಲಿನ ಸಿಬ್ಬಂದಿ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಆಗಲು ರಾತ್ರಿ ಎನ್ನದೆ ಚಕ್ ಪೋಸ್ಟ್ ಸಿಬ್ಬಂದಿ ಮದ್ಯಪಾನ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿರುವುದು ಕಂಡುಬಂದಿದೆ. ಚೆಕ್ ಪೋಸ್ಟ್ ಕಚೇರಿ, ಕ್ಯಾಂಪ್ ತುಂಬೆಲ್ಲ ಮದ್ಯ ಸೇವಿಸಿದ ಖಾಲಿ ಬಾಟಲಿಗಳ ರಾಶಿಯೇ ಇದಕ್ಕೆ ಸಾಕ್ಷಿಯಾಗಿದೆ.
ಈ ಚೆಕ್ ಪೋಸ್ಟ್ ನಲ್ಲಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಇಲ್ಲಿಂದ ಕೆಮ್ಮಣ್ಣುಗುಂಡಿಗೆ ಹೋಗಲು ಬರುವ ಪ್ರವಾಸಿಗರಿಗೆ, ವಾಹನಗಳಿಗೆ ಇಂತಿಷ್ಟು ದುಡ್ಡು ಕಟ್ಟಿಸಿಕೊಂಡು ಪಾಸ್ ನೀಡುತ್ತಾರೆ. ಸಂಜೆ 6 ರಿಂದ ಬೆಳಗ್ಗೆ 6 ವರೆಗೆ ಈ ರಸ್ತೆ ರಾತ್ರಿ ಸಂಚಾರ ನಿಷೇಧವಿದೆ. ರಾತ್ರಿವೇಳೆ ಇಲ್ಲಿ ಭಾರಿ ಮದ್ಯ ಸಮಾರಾಧನೆ , ಪಾರ್ಟಿ, ಮೋಜು, ಮಸ್ತಿ ಮಿತಿಮೀರಿದೆ. ಇಲ್ಲಿನ ಅದಧಿಕಾರಿಗಳು, ದಿನಗೂಲಿ ಸಿಬ್ಬಂದಿ ಕಂಠ ಪೂರ್ತಿ ಕುಡಿದು ಮತ್ತಿನಲ್ಲಿರುತ್ತಾರೆ. ಇತ್ತ ಸರ್ಕಾರಿ ಗಾರ್ಡ್, ವನಪಾಲಕ, ವಲಯ ಅರಣ್ಯಾಧಿಕಾರಿಗಳ ಶಾಮೀಲಾಗಿದ್ದಾರೆ. ಹಾಗಾಗಿ ಇಲ್ಲಿ ಹೇಳುವವರು ಕೇಳುವವರು ಇಲ್ಲ ದಂತಾಗಿ ಮದ್ಯಪಾನ ಮಾಡುವ ಅಡ್ಡೆಯಾಗಿ ಕ್ಯಾಂಪ್, ಚೆಕ್ ಪೋಸ್ಟ್ ಕಚೇರಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸಿಬ್ಬಂದಿ ಜೊತೆಗೆ ಇಲ್ಲಿ ಕೆಲವು ರಾಜಕಾರಣಿಗಳ ಚೇಲಗಳು ಕೂಡ ಬಂದು ಪಾರ್ಟಿ ಮಾಡುವುದು ಮಾಮೂಲಾಗಿದೆ. ರಾಜಕಾರಣಿಗಳ ಕಡೆಯವರಿಗೆ ಸಿಬ್ಬಂದಿ ಮದ್ಯ ತಂದುಕೊಟ್ಟು ಇಲ್ಲಿ ಪಾರ್ಟಿ ಮಾಡಲಾಗುತ್ತದೆ. ಚೆಕ್ ಪೋಸ್ಟ್ ಕಚೇರಿ ಗಬ್ಬು ನಾರುತ್ತಿದ್ದು, ಎಲ್ಲಿ ನೋಡಿದರೂ ಒಳಗಡೆ ಮದ್ಯ ಬಾಟಲಿಗಳು, ಟೆಟ್ರಾ ಪ್ಯಾಕ್ ಗಳು ತುಂಬಿ ಹೋಗಿವೆ.
ಕೋವಿಡ್ ಸಂದರ್ಭದಲ್ಲಿ ಈ ವಲಯದಲ್ಲಿ ಉನ್ನತ ಅಧಿಕಾರಿಗಳು ಪಾರ್ಟಿ ಮೋಜು ಮಸ್ತಿ ಮಾಡಲು ಹೋಗಿ ಗ್ರಾಮಸ್ಥರಿಂದ ಛೀಮಾರಿ ಹಾಕಿಸಿಕೊಂಡಿದ್ದು ಇದೆ. ಈಗ ಇಲ್ಲಿನ ಸಿಬ್ಬಂದಿಯೇ ಚೆಕ್ ಪೋಸ್ಟ್ ಕಚೇರಿ ಹಾಗೂ ಇಲ್ಲಿರುವ ಬೇಟೆ ನಿಗ್ರಹ ಶಿಬಿರವನ್ನು ಮದ್ಯ ಸೇವನೆಗೆ ಅಡ್ಡೆಗಳಾಗಿ ಮಾಡಿದ್ದಾರೆ. ಇಲ್ಲಿ ಶಿಕಾರಿ ಹೆಚ್ಚಿದ್ದು ಅದರ ಕಡಿವಾಣಕ್ಕೆ 2017ರಲ್ಲಿ ಚೆಕ್ ಪೋಸ್ಟ್ ಮತ್ತು ಬೇಟೆ ನಿಗ್ರಹ ಶಿಬಿರ ಸ್ಥಾಪಿಸಲಾಯಿತು. ಆದರೆ, ಸಿಬ್ಬಂದಿ ಪಾರ್ಟಿ ತಾಣವಾಗಿ ಪರಿವರ್ತನೆ ಆಗಿದ್ದು ನಿಜಕ್ಕೂ ಬೇಸರದ ಸಂಗತಿ.
ಈ ಕೂಡಲೇ ಮದ್ಯಪಾನ ನಿರತ ಅಧಿಕಾರಿ, ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಚೆಕ್ ಪೋಸ್ಟ್ ದಿನದ 24 ಗಂಟೆ ಕಾರ್ಯ ಮಾಡಬೇಕು. ಜತೆಗೆ ನಿರ್ಲಕ್ಷ ತೋರಿದ ಇಲ್ಲಿನ ವಲಯ ಅರಣ್ಯಾಧಿಕಾರಿಯನ್ನು ಅಮಾನತ್ತು ಮಾಡ ಬೇಕು. ಅಮೂಲ್ಯ ವನ್ಯ ಸಂಪತ್ತನ್ನು ಉಳಿಸಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರವಾದಿ ಗಳು ಒತ್ತಾಯಿಸಿದ್ದಾರೆ.