ಕೊಬ್ಬರಿ ನೋಂದಣಿ: ತುಮಕೂರು ತೆಂಗು ಬೆಳೆಗಾರರಿಗೆ ಅನ್ಯಾಯ

KannadaprabhaNewsNetwork |  
Published : Feb 13, 2024, 12:47 AM ISTUpdated : Feb 13, 2024, 03:38 PM IST
ಕೊಬ್ಬರಿ ನೊಂದಣಿ ಪ್ರಕ್ರಿಯೆಯಲ್ಲಿ ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನ್ಯಾಯ  | Kannada Prabha

ಸಾರಾಂಶ

ಕೊಬ್ಬರಿ ನೋಂದಣಿ ಪ್ರಕ್ರಿಯೆಯಲ್ಲಿ ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನ್ಯಾಯವಾಗಿದ್ದು, ಸರ್ಕಾರ ಪುನಃ ನೋಂದಣಿ ಪ್ರಾರಂಭಿಸಿ ಆಯಾ ಜಿಲ್ಲೆಗಳ ಒಟ್ಟು ಉತ್ಪನ್ನದ ಮೇಲೆ ಶೇ. 25ರಷ್ಟು ಮಾತ್ರವೇ ಕೊಬ್ಬರಿ ಖರೀದಿಗೆ ಗುರಿ ನಿಗದಿಪಡಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ  ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕೊಬ್ಬರಿ ನೋಂದಣಿ ಪ್ರಕ್ರಿಯೆಯಲ್ಲಿ ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರಿಗೆ ಅನ್ಯಾಯವಾಗಿದ್ದು, ಸರ್ಕಾರ ಪುನಃ ನೋಂದಣಿ ಪ್ರಾರಂಭಿಸಿ ಆಯಾ ಜಿಲ್ಲೆಗಳ ಒಟ್ಟು ಉತ್ಪನ್ನದ ಮೇಲೆ ಶೇ. 25ರಷ್ಟು ಮಾತ್ರವೇ ಕೊಬ್ಬರಿ ಖರೀದಿಗೆ ಗುರಿ ನಿಗದಿಪಡಿಸಬೇಕೆಂದು ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಎಪಿಎಂಸಿಯ ರೈತ ಭವನದಲ್ಲಿ ಶನಿವಾರ ರೈತ ಸಂಘ ಹಾಗೂ ಪ್ರಾಂತ ರೈತ ಸಂಘದ ವತಿಯಿಂದ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರಾಜ್ಯದ ಏಳು ಜಿಲ್ಲೆಗಳಲ್ಲಿ ನಫೆಡ್ ಕೇಂದ್ರಗಳ ಮೂಲಕ 62.500 ಮೆಟ್ರಿಕ್ ಟನ್ ಖರೀದಿ ಮಾಡುವಂತೆ ಆದೇಶ ಮಾಡಿದೆ. 

ಆದರೆ ಈಗಾಗಲೆ ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಒತ್ತಡದಿಂದ ಅನಧಿಕೃತವಾಗಿ ನೋಂದಣಿ ಪ್ರಕ್ರಿಯೆ ದುಪ್ಪಟ್ಟಾಗಿದ್ದು, ಇದರಿಂದ ತುಮಕೂರು ಜಿಲ್ಲೆ ಸೇರಿದಂತೆ ಉಳಿದ ಜಿಲ್ಲೆಗಳ ಕೊಬ್ಬರಿ ಬೆಳೆಗಾರರು ನಷ್ಟವುಂಟಾಗಿದೆ. 

ತಿಪಟೂರು ನೋಂದಣಿ ಪ್ರಕಿಯೆ ಬಹಳ ವಿಳಂಭವಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ, ಹಾಸನ ಜಿಲ್ಲೆಯಲ್ಲಿ ಹೆಚ್ಚು, ಕೊಬ್ಬರಿ ನೋಂದಣಿಯಾಗಿದೆ. 

ಹಾಸನ ಮತ್ತಿತರ ಕಡೆ ಕಾನೂನು ಬಾಹಿರವಾಗಿ ಮಾಡಿಕೊಂಡಿರುವ ನೋಂದಣಿಯನ್ನು ರದ್ದು ಮಾಡಿ ಹೊಸದಾಗಿ ನೋಂದಣಿ ಪ್ರಾರಂಬಿಸಬೇಕು ಎಂದರು.

ತಿಪಟೂರಿನಲ್ಲಿ ಆನ್‌ಲೈನ್ ಮತ್ತು ಸರ್ವರ್‌ ಸಮಸ್ಯೆಯಿಂದ ಸರಿಯಾಗಿ ನೋಂದಣಿಯಾಗಿಲ್ಲ. ಈ ಬಗ್ಗೆ ತಹಸೀಲ್ದಾರ್‌, ಉಪವಿಭಾಗಾಧಿಕಾರಿ, ಶಾಸಕರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. 

ಅಂಕಿ ಅಂಶಗಳನ್ನು ನೀಡಿದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗದವರಾಗಲಿ ರೈತರಿಗೆ ಸ್ಪಂದಿಸಿಲ್ಲ. ಚುನಾವಣೆಗಾಗಿ ಮಾತ್ರ ತೆಂಗು ಬೆಳೆಗಾರರನ್ನು ಬಳಸಿಕೊಳ್ಳುತ್ತಿದ್ದಾರೆ. 

ಕೂಡಲೆ ಹೊಸದಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು ಇಲ್ಲವಾದಲ್ಲಿ ರೈತರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರ.

ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ ಮತ್ತು ರೈತ ಸಂಘದ ತಾ. ಅಧ್ಯಕ್ಷ ಜಯಚಂದ್ರಶರ್ಮ ಮಾತನಾಡಿ, ನೋಂದಣಿ ಕೇಂದ್ರದಲ್ಲಿ ಬಯೋಮೆಟ್ರಿಕ್ ನ್ಯೂನತೆಯಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು ಕೇವಲ ಐದೇ ದಿನಗಳಲ್ಲಿ ನೋಂದಣಿ ಪ್ರಕ್ರಿಯೆ ಮುಗಿದು ಹೋಗಿದೆ. 

ಹಾಸನ ಜಿಲ್ಲೆಯಲ್ಲಿ ಶೇ.೪೦ರಷ್ಟು ನೋಂದಣಿಯಾಗಿದ್ದರೆ ಬೇರೆ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. ಅಲ್ಲಿ ರೈತರ ಮನೆ ಮನೆಗಳಿಗೆ ಕಂಪ್ಯೂಟರ್‌ ತೆಗೆದುಕೊಂಡು ಹೋಗಿ ಅಕ್ರಮವಾಗಿ ನೋಂದಣಿ ಮಾಡಿದ್ದಾರೆ. 

ಈ ಬಗ್ಗೆ ರಾಜ್ಯ ಸಹಕಾರ ಮಾರಾಟ ಮಂಡಳಿಯು ಅಗತ್ಯ ಕ್ರಮ ಕೈಗೊಂಡು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದರು.

ರೈತ ಮುಖಂಡ ತಿಮ್ಲಾಪುರ ದೇವರಾಜು ಮಾತನಾಡಿ, ಇಲ್ಲಿನ ತೆಂಗು ಬೆಳೆಗಾರರು ಹೆಸರು ನೋಂದಾಯಿಸಲು ಒಂದು ವಾರದಿಂದ ಬಿಸಲಿನಲ್ಲಿ ನಿಂತು ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಿದ್ದಾರೆ. 

ತಾಂತ್ರಿಕ ದೋಷ, ಸಿಸ್ಟಂ ಸಮಸ್ಯೆಯಿಂದ ನೋಂದಣಿಯಾಗಿಲ್ಲ. ಸರ್ಕಾರ ಏಕಾಏಕಿ ನೋಂದಣಿಯನ್ನು ಸ್ಥಗಿತಗೊಳಿಸಿದ್ದು ಸರಿಯಲ್ಲ. ಇಲ್ಲಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಸ್ಥಳಕ್ಕೆ ಆಗಮಿಸದೆ ಸಮಸ್ಯೆಯನ್ನು ಆಲಿಸಿಲ್ಲ. 

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ. ತೆಂಗು ಬೆಳೆಗಾರರ ಮೇಲೆ ಇದೇ ರೀತಿ ತಾತ್ಸಾರ ಮನೋಭಾವ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಪ್ರೊ. ಜಯಾನಂದಯ್ಯ, ರಾಜಮ್ಮ, ಮಲ್ಲಿಕಾರ್ಜುನಯ್ಯ, ಶ್ರೀಕಾಂತ್ ಕೆಳಹಟ್ಟಿ, ಮನೋಹರ್ ಪಟೇಲ್, ಶ್ರೀಹರ್ಷ, ಗಂಗಾಧರಯ್ಯ, ಷಡಕ್ಷರಿ, ಶಿವಾನಂದಯ್ಯ, ತಡಸೂರು ನಾಗಣ್ಣ, ಹಾವೇನಹಳ್ಳಿ ದಿಲೀಪ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ