ವರುಣನ ಅಬ್ಬರಕ್ಕೆ ಕಾಫಿ ನಾಡು ತತ್ತರ: ಹಲವೆಡೆ ಭೂ ಕುಸಿತ

KannadaprabhaNewsNetwork |  
Published : Jun 16, 2025, 01:30 AM IST
ಭಾರೀ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕವಿಕಲ್‌ ಗಂಡಿ ಬಳಿ ಪ್ರವಾಸಿಗರ ಕಾರ್‌ ಪಲ್ಟಿಯಾಗಿರುವುದು. | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಭಾನುವಾರ ಮತ್ತಷ್ಟು ಜೋರಾಗಿದ್ದು ಮಲೆನಾಡಿನ ಹಲವೆಡೆ ಭೂ ಕುಸಿತ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿವೆ.

- ಎನ್‌.ಎಚ್‌. 169 ರಲ್ಲಿ ಭೂ ಕುಸಿತ, ಕವಿಕಲ್‌ ಗಂಡಿ ಬಳಿ ಪ್ರವಾಸಿಗರ ಕಾರ್‌ ಪಲ್ಟಿ, ತುಂಬಿ ಹರಿಯುತ್ತಿರುವ ನದಿಗಳು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಭಾನುವಾರ ಮತ್ತಷ್ಟು ಜೋರಾಗಿದ್ದು ಮಲೆನಾಡಿನ ಹಲವೆಡೆ ಭೂ ಕುಸಿತ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿವೆ.

ಶೃಂಗೇರಿ ತಾಲೂಕಿನ ನೆಮ್ಮಾರ್‌ ಸಮೀಪದ ವಿಪರೀತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಭಾನುವಾರ ಮಧ್ಯ ರಾತ್ರಿ ಗುಡ್ಡದ ಮಣ್ಣು ಬಿದ್ದಿದ್ದರಿಂದ ಶೃಂಗೇರಿಯಿಂದ ಎಸ್‌.ಕೆ. ಬಾರ್ಡರ್‌ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಗ್ನಿಶಾಮಕದಳ, ತುರ್ತು ಸೇವೆ ಅಧಿಕಾರಿಗಳ ತಂಡ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಮಣ್ಣನ್ನು ತೆರವುಗೊಳಿಸಿದ ಬಳಿಕ ಭಾನುವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಈ ರಸ್ತೆಯಲ್ಲಿ ಪುನಃ ವಾಹನಗಳ ಸಂಚಾರ ಆರಂಭಗೊಂಡಿತು.

ಚಿಕ್ಕಮಗಳೂರು - ದತ್ತಪೀಠ ರಸ್ತೆಯ ಕವಿಕಲ್‌ ಗಂಡಿ ಬಳಿ ಐವರು ಪ್ರವಾಸಿಗರಿದ್ದ ಕಾರೊಂದು ಪಲ್ಟಿಯಾಗಿದ್ದು, ಎಲ್ಲರಿಗೂ ಚಿಕ್ಕಪುಟ್ಟ ಗಾಯಾಗಳಾಗಿವೆ. ಈ ಕಾರಿನ ಹಿಂದೆ ಇದ್ದ ಪ್ರವಾಸಿಗರು ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.ತೇವಾಂಶ ಹೆಚ್ಚು:

ಪೂರ್ವ ಮುಂಗಾರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಿರಿ ಪ್ರದೇಶದಲ್ಲಿ ತೇವಾಂಶ ಹೆಚ್ಚಾಗಿದ್ದು, ಕಳೆದ ನಾಲ್ಕೈದು ದಿನ ಗಳಿಂದ ನಿರಂತರವಾಗಿ ಬರುತ್ತಿರುವ ಮಳೆಗೆ ಹಲವೆಡೆ ಭೂ ಕುಸಿತ ಉಂಟಾಗುತ್ತಿದೆ. ಗಿರಿ ಪ್ರದೇಶದಲ್ಲಿ ವಾಹನಗಳ ಸಂಚಾರ ಆತಂಕ ಮೂಡಿಸುತ್ತಿದೆ.

ಆದರೂ ಕೂಡ ನೂರಾರು ವಾಹನಗಳಲ್ಲಿ ಪ್ರವಾಸಿಗರು ಗಿರಿ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿ ನಾದ್ಯಂತ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರೆ, ಗಿರಿ ಪ್ರದೇಶದ ಕೆಲವೆಡೆ ರಸ್ತೆ ಮೇಲೆ ಧರೆ ಕುಸಿತ ಉಂಟಾಗಿದೆ. ದಿನೇ ದಿನೇ ಗಿರಿ ಭಾಗದ ನಿವಾಸಿಗರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಮೂಡಿಗೆರೆ ತಾಲೂಕು ಕೇಂದ್ರ ಸೇರಿದಂತೆ ಬಣಕಲ್‌, ಗೋಣಿಬೀಡು, ಜಾವಳಿ, ಹಲವೆಡೆ ಬಲವಾಗಿ ಗಾಳಿ ಬೀಸುತ್ತಿದ್ದು, ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಝರಿಗಳಲ್ಲಿ ಮತ್ತೆ ಜಲಪಾತಗಳು ಮೈದುಂಬಿ ಧುಮುಕುತ್ತಿವೆ. ಹೇಮಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಶೃಂಗೇರಿ ಸೇರಿದಂತೆ ಕಿಗ್ಗಾ, ನೆಮ್ಮಾರ್‌ ಭಾಗದಲ್ಲಿ ಭಾರಿ ಮಳೆ ಬೀಳುತ್ತಿರುವ ಪರಿಣಾಮ ತುಂಗಾ ನದಿ ತುಂಬಿ ಹರಿಯುತ್ತಿದೆ. ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ತುಂಗಾ ಜಲಾಶಯದ ನೀರಿನ ಮಟ್ಟವೂ ಏರಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ತಪ್ಪಲಿನಲ್ಲಿರುವ ಸಿರಿಮನೆ ಜಲಪಾತ ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದೆ.

ಕಳಸ, ಕುದುರೆಮುಖ, ಹೊರನಾಡು, ಮಾಗುಂಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆ ಬರುತ್ತಿರು ವುದರಿಂದ ಭದ್ರಾ ನದಿಯ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಇದರಿಂದಾಗಿ ಭದ್ರಾ ಜಲಾಶಯದ ನೀರಿನ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ಕೊಪ್ಪ, ಜಯಪುರ, ಹರಿಹರಪುರ, ಎನ್‌.ಆರ್‌.ಪುರ ತಾಲೂಕಿನ ಬಾಳೆಹೊನ್ನೂರು ಸೇರಿದಂತೆ ಹಲವೆಡೆ ಮಳೆ ಬರುತ್ತಿವೆ. ಒಟ್ಟಾರೆ ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ.

ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆ ಬರುತ್ತಿದ್ದು, ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. 15 ಕೆಸಿಕೆಎಂ 1ಭಾರೀ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕವಿಕಲ್‌ ಗಂಡಿ ಬಳಿ ಪ್ರವಾಸಿಗರ ಕಾರ್‌ ಪಲ್ಟಿಯಾಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?