ಕನ್ನಡಪ್ರಭ ವಾರ್ತೆ ಸಕಲೇಶಪುರ
೨೦೨೫ ರ ಆರು ತಿಂಗಳ ಅವಧಿಯಲ್ಲಿ ಕಾಡಾನೆ- ಮಾನವ ಸಂಘರ್ಷದಲ್ಲಿ ನಾಲ್ಕು ಕಾಡಾನೆಗಳು ಮೃತ ಪಟ್ಟರೆ. ಆರು ಜನರು ಮರಣ ಹೊಂದಿದ್ದಾರೆ.
----ಜ್ವಲಂತ ಸಮಸ್ಯೆ
ಮಲೆನಾಡು ಭಾಗದಲ್ಲಿ ಕಾಡಾನೆ- ಮಾನವನ ನಡುವಿನ ಸಂಘರ್ಷ ಕಳೆದ ಎರಡು ದಶಕಗಳಿಂದ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ಈ ಅವಧಿಯಲ್ಲಿ ಕಾಡಾನೆಗಳಿಂದಾಗಿ ಪ್ರಾಣ ಕಳೆದುಕೊಂಡವರು ಅದೆಷ್ಟೋ....ಮಾನವನ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣಗಳಿಂದಾಗಿ ಪ್ರಾಣ ಕಳೆದುಕೊಂಡ ಆನೆಗಳು ಅದೆಷ್ಟೋ......ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಬೇಲೂರು ಭಾಗಗಳಲ್ಲಿ ಕಾಡಾನೆಗಳ ಸಂಖ್ಯೆ ನಿಜಕ್ಕೂ ಹೆಚ್ಚಾಗಿದೆ. ಜತೆಗೆ ಅವುಗಳಲ್ಲಿ ಸಾಕಷ್ಟು ಕಾಡಾನೆಗಳು ಕಾಡಾನೆಗಳಾಗಿ ಉಳಿಯದೆ ನಾಡಾನೆಗಳಂತೆ ವರ್ತಿಸುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಆನೆಗಳ ಮನ:ಸ್ಥಿತಿ ಬದಲಾವಣೆ:ಈ ಬದಲಾವಣೆಗೆ ಆನೆಗಳ ಮನಸ್ಥಿತಿ ಒಂದು ಕಾರಣವಾದರೆ, ಮಾನವನಿಂದಾಗಿ ಕಾಡಿನೊಳಗೆ ಆಗುತ್ತಿರುವ ಬೆಳವಣಿಗೆ ಮತ್ತೊಂದು ಕಾರಣವಾಗುತ್ತದೆ. ಮೊದಲ ಕಾರಣವನ್ನು ನೋಡುವುದಾದರೆ, ಬಹುತೇಕ ಕಾಡಾನೆಗಳು ಕೂಡ ಈಗ ಕಾಡಿನ ಸಖ್ಯಕ್ಕಿಂತ ನಾಡಿನ ಸಖ್ಯ ಬೆಳೆಸಿಕೊಂಡಿವೆ. ಕಾಡಿನಲ್ಲಾದರೆ ಆಹಾರಕ್ಕಾಗಿ ಅಲೆದಾಡಬೇಕು. ಕೇವಲ ಹುಲ್ಲು, ಸೊಪ್ಪು ತಿಂದು ಬದುಕಬೇಕು. ಅದೇ ನಾಡಿನಲ್ಲಾದರೆ ಬತ್ತ, ಅಕ್ಕಿ, ಗೋದಿ....ಹೀಗೆ ರುಚಿಕಟ್ಟಾದ ಆಹಾರ ಯಾವುದೇ ಕಷ್ಟವಿಲ್ಲದೆ ಸಿಗುತ್ತಿದೆ. ಈ ರುಚಿ ಕಂಡ ಕೆಲ ಆನೆಗಳಂತೂ ಊರೊಳಗೆ ಇಲ್ಲವೇ ಊರಿನ ಆಸುಪಾಸಿನಲ್ಲೇ ಠಿಕಾಣಿ ಹೂಡಿವೆ. ಆರಂಭದಲ್ಲಿ ಒಂದೆರೆಡು ಆನೆಗಳು ಈ ಚಾಳಿ ಮೈಗೂಡಿಸಿಕೊಂಡಿದ್ದವು. ಆದರೆ, ಈಗ ಹಲವು ಆನೆಗಳು ಇದೇ ಪ್ರವೃತ್ತಿ ಮಾಡಿಕೊಂಡಿದ್ದು, ಜನವಸತಿ ಪ್ರದೇಶಗಳ ಆಸುಪಾಸಿನಲ್ಲೇ...ಅಂದರೆ....ಸಮೀಪದ ಕಾಫಿ ತೋಟಗಳನ್ನೇ ತನ್ನ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಜನವಸತಿ ಪ್ರದೇಶಗಳನ್ನೇ ತಮ್ಮ ವಸತಿ ಪ್ರದೇಶಗಳನ್ನಾಗಿ ಮಾಡಿಕೊಳ್ಳುತ್ತಿರುವುದರಿಂದ ಆನೆ ಮತ್ತು ಮಾನವ ಈ ಇಬ್ಬರ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.
ಕಾಡಿನ ಸ್ವರೂಪದಲ್ಲೂ ಬದಲಾವಣೆ:ಇನ್ನು ಇಷ್ಟೆಲ್ಲಾ ಸಮಸ್ಯೆಗೆ ಕಾಡಿನ ಸ್ವರೂಪದಲ್ಲಿ ಆಗಿರುವ ಬದಲಾವಣೆಯೂ ಕಾರಣ. ಅಂದರೆ ಈ ಬದಲಾವಣೆಗೆ ಮಾನವನಲ್ಲದೆ ಮತ್ತ್ಯಾರು ಕಾರಣ ಅಲ್ಲವೇ ಅಲ್ಲ. ಮಾನವ ತನ್ನ ದುರಾಸೆಗಾಗಿ ಆನೆಗಳ ಆವಾಸಸ್ಥಾನವಾದ ಕಾಡನ್ನು ತನಗೆ ಬೇಕಾದಂತೆಲ್ಲಾ ದುರ್ಬಳಕೆ ಮಾಡುತ್ತಿರುವುದೇ ಇದಕ್ಕೆ ಕಾರಣ. ಇದರ ಪರಿಣಾಮವಾಗಿ ಕಾಡಿನೊಳಗೆ ಆನೆಗಳಿಗೆ ಬೇಕಾದ ಆಹಾರ ಸಿಗದಂತಾಗಿದೆ. ಕಾಡಿನಲ್ಲಿ ಆನೆಗಳಿಗೆ ಹಲಸಿನ ಹಣ್ಣು, ಬಿದಿರು ಹಾಗೂ ತೇಗದ ಎಲೆಗಳು ಸೇರಿದಂತೆ ಕೆಲವೊಂದು ಪ್ರಮುಖ ಆಹಾರ. ಆದರೆ, ಮಾನವನ ದುರಾಸೆಗೆ ಇಂದು ಕಾಡಿನಲ್ಲಿ ಹುಡುಕಿದರೂ ಹಲಸಿನ ಮರಗಳು ಸಿಗದಂತಾಗಿದೆ. ಕೆಲ ವರ್ಷಗಳ ಹಿಂದೆಯೇ ಕಟ್ಟೆ ರೋಗ ಬಂದು ಬಿದಿರೆಲ್ಲಾ ನಾಶವಾಗಿದೆ. ಕಾಡಿನಲ್ಲಿ ಬಿದಿರನ್ನು ಬೆಳೆಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆಯಾದರೂ ಅಲ್ಲಿರುವ ಆನೆಗಳಿಗೆ ಸಾಕಷಾಗುವಷ್ಟು ಬಿದಿರು ಸಿಗುತ್ತಿಲ್ಲ. ಇನ್ನು ತೇಗದ ಮರಗಳನ್ನು ಮಾನವರು ಬಿಟ್ಟಿಲ್ಲ. ಹೀಗಿರುವಾಗ ಆನೆಗಳು ಆಹಾರಕ್ಕಾಗಿ ಎಲ್ಲಿಗೆ ಹೋಗಬೇಕು? ಇದೇ ಕಾರಣಕ್ಕಾಗಿ ಆನೆಗಳು ಕೂಡ ತಮ್ಮ ಜೀವನ ಶೈಲಿಯನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಂಡು ತಮಗೆ ಬೇಕಾದ ಆಹಾರ ಸಿಗುವ ಕಾಫಿ ತೋಟಗಳನ್ನೇ ತಮ್ಮ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿವೆ. ಅಂದರೆ, ಮಾನವರು ಕಾಡಾನೆಗಳ ಆವಾಸ ಸ್ಥಾನವಾದ ಕಾಡನ್ನು ನಾಶ ಮಾಡುತ್ತಿರುವುದೇ ಇಷ್ಟೆಲ್ಲಾ ಸಮಸ್ಯೆಗೆ ಮೂಲ ಕಾರಣ ಎನ್ನುವುದು ಸತ್ಯ. ಕಾಡಾನೆಗಳಿಂದ ಮಾನವ ಸತ್ತಾಗ ಸರ್ಕಾರ ಅದಕ್ಕೆ ಲಕ್ಷಗಟ್ಟಲೆ ಪರಿಹಾರ ಕೊಟ್ಟು ಜೀವಕ್ಕೆ ಬೆಲೆ ಕಟ್ಟುತ್ತಿದೆ. ಆದರೆ, ಮಾನವನ ಕಾರಣದಿಂದಾಗಿ ಕಾಡಾನೆ ಸತ್ತರೆ ಅದಕ್ಕೆ ಯಾರು ಪರಿಹಾರ ಕೊಡುತ್ತಾರೆ..?