ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿಗೆ ಬೆಳ್ಳಿ ಹಬ್ಬದ ಸಂಭ್ರಮ

KannadaprabhaNewsNetwork |  
Published : Jun 16, 2025, 01:25 AM IST
ಚಿತ್ರ : 14ಎಂಡಿಕೆ1 :ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿಗೆ ಬೆಳ್ಳಿ ಹಬ್ಬದ ಉದ್ಘಾಟನೆ. | Kannada Prabha

ಸಾರಾಂಶ

ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಇನ್ನು ಮುಂದೆಯೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಕ್ಷಿಣ ಕೊಡಗಿನ ಕುಟ್ಟದ ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿ ಬೆಳ್ಳಿ ಹಬ್ಬದ ಸಂಭ್ರದಲ್ಲಿದೆ. ಇತ್ತೀಚೆಗೆ ನಡೆದ ಮಂಡಳಿಯ 25ನೇ ವಾರ್ಷಿಕ ಮಹಾಸಭೆಯಲ್ಲಿ ಇನ್ನು ಮುಂದೆಯೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಯಿತು.ಮಹಿಳಾ ಸಾಂಸ್ಕೃತಿಕ ಮಂಡಳಿಯ ಕಚೇರಿಯ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಳಿಯ ಅಧ್ಯಕ್ಷರಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಅವರು ಸಂಘದ ಯಶೋಗಾಥೆಯ ಕುರಿತು ವಿವರಿಸಿದರು.2001ರಲ್ಲಿ ಮುಕ್ಕಾಟಿರ ರೇಣು ಗಣಪತಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಾಂಸ್ಕೃತಿಕ ಮಂಡಳಿ ಸ್ಥಾಪನೆಗೊಂಡಿತು. ಆರಂಭದ 6 ವರ್ಷಗಳ ಕಾಲ ರೇಣು ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 2007 ರಿಂದ ತಾವು ಅಧ್ಯಕ್ಷರಾಗಿ ಮುಂದುವರೆದಿದ್ದು, ಇದೀಗ ಮಂಡಳಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವುದು ಹರ್ಷ ತಂದಿದೆ ಎಂದರು. ಮಂಡಳಿಯಲ್ಲಿ 104 ಮಹಿಳಾ ಸದಸ್ಯರಿದ್ದು, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಅಪಘಾತ ಮತ್ತು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವವರಿಗೆ ಮಂಡಳಿ ಧನ ಸಹಾಯ ಮಾಡಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಮತ್ತು ಧನ ಸಹಾಯ ನೀಡಲಾಗಿದೆ. ಚೂರಿಕಾಡು ಪ್ರಾಥಮಿಕ ಶಾಲೆಯನ್ನು 2 ವರ್ಷಗಳ ಕಾಲ ದತ್ತು ಪಡೆದು ಅಭಿವೃದ್ಧಿಗೆ ಕೈಜೋಡಿಸಲಾಗಿದೆ.ಚೂರಿಕಾಡು ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ 40 ಸಾವಿರ ರು. ಧನ ಸಹಾಯ ಮಾಡಲಾಗಿದೆ. 2003 ರಿಂದ ಸತತ ಮೂರು ವರ್ಷಗಳ ಕಾಲ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ನೀಡಲಾಗಿದೆ. ಸುಮಾರು 5 ಎಕರೆ ಪ್ರದೇಶವನ್ನು ಹೊಂದಿರುವ ಕುಟ್ಟ ಆಸ್ಪತ್ರೆಯ ಆವರಣವನ್ನು ಕಳೆದ 20 ವರ್ಷಗಳಿಂದ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಗಿದೆ.ನಾಯಿಗಳ ಸುರಕ್ಷತೆಯ ದೃಷ್ಟಿಯಿಂದ ರೇಬಿಸ್ ಲಸಿಕೆಯನ್ನು ನೀಡುವ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಡವ ಸಿನಿಮಾಗಳನ್ನು ಪ್ರೋತ್ಸಾಹಿಸಲಾಗಿದೆ, ಕೊಡವರಿಗೆ ಆರ್ಥಿಕ ನೆರವು ನೀಡಲಾಗಿದೆ, ಕೊಡವರು ಹಾಗೂ ಕೊಡಗಿನ ಅಭಿವೃದ್ಧಿಗಾಗಿ ಹೋರಾಟಗಳನ್ನು ನಡೆಸಲಾಗಿದೆ. ದಂತ ಚಿಕಿತ್ಸಾ ಶಿಬಿರ ಮತ್ತು ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗಿದೆ. ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಕುಟ್ಟ ಕೊಡವ ಸಮಾಜದಲ್ಲಿ ನಡೆಯುವ ಕಕ್ಕಡ ನಮ್ಮೆಯಲ್ಲಿ ಮಂಡಳಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಬಾಳುಗೋಡು ಕೊಡವ ನಮ್ಮೆಗೆ ಧನ ಸಹಾಯ ಮಾಡಲಾಗಿದೆ. ಇನ್ನು ಮುಂದೆಯೂ ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿ ಸಾಮಾಜಿಕ ಕಳಕಳಿಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಿದೆ ಎಂದು ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ವಿವರಿಸಿದರು.ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.ಬಾಡಗ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾಪ್ಸ್ ಟ್ರಸ್ಟಿ ಮಾಚಿಮಾಡ ರಾಜಾ ತಿಮ್ಮಯ್ಯ ಅವರು ಮಹಿಳಾ ಸಾಂಸ್ಕೃತಿಕ ಮಂಡಳಿಯ ಸಾಮಾಜಿಕ ಕಳಕಳಿಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಮಂಡಳಿಯ ಕಾರ್ಯದರ್ಶಿ ಕೋಳೆರ ಪುತ್ತುಳಿ ಮುತ್ತಣ್ಣ ಅವರು ಸ್ವಾಗತಿಸಿ, ನಿರೂಪಿಸಿದರು. ಪಾಲೆಕಂಡ ಅನಿತಾ ಅಯ್ಯಣ್ಣ ಅತಿಥಿಗಳ ಪರಿಚಯ ಮಾಡಿದರು, ಬೊಳ್ಳೆರ ಲೀನಾ ಕುಟ್ಟಪ್ಪ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ