ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ಮೋಟಗಿ ಮಠದ ಅನುಭವ ಮಂಟಪ ವೇದಿಕೆಯಲ್ಲಿ ಭಾನುವಾರ ಡಾ.ಜೆ.ಪಿ.ದೊಡಮನಿ ಅಭಿನಂದನಾ ಸಮಿತಿ, ಅಥಣೀಶ ಯುವ ವೇದಿಕೆ ಹಾಗೂ ವಿವಿಧ ಸಾಹಿತ್ಯ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತಿ ಜೆ.ಪಿ.ದೊಡಮನಿ ಸಾಹಿತ್ಯ ಅವಲೋಕನ, ಅಭಿನಂದನೆ, ಅನುವಾದ ಜ್ಯೋತಿ, ಸಂಕೀರ್ಣ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜೆ.ಪಿ.ದೊಡಮನಿ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಬಹುಮುಖ ಸಾಧನೆ ತೋರಿ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಸೃಜನಶೀಲ ಸಾಹಿತ್ಯ ಮತ್ತು ದಾರ್ಶನಿಕರ ಜೀವನ ಚರಿತ್ರೆ ಕನ್ನಡ ಭಾಷೆಯಲ್ಲಿ ಅನುವಾದಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಸಾವಿತ್ರಿಬಾಯಿ ಪುಲೆ, ಜ್ಯೋತಿಬಾಪುಲೆ, ಅಂಬೇಡ್ಕರ್, ಶಾಹು ಮಹಾರಾಜ ಸೇರಿದಂತೆ ಇನ್ನಿತರ ಗ್ರಂಥಗಳನ್ನು ಅನುವಾದಿಸಿದ್ದಾರೆ. ಜೆಪಿ ದಂಪತಿ ನನ್ನ ಶಿಷ್ಯರಾಗಿರುವುದು ಹೆಮ್ಮೆಯ ಸಂಗತಿ ಎಂದರು.ಪ್ರಭಾ ಬೋರಗಾಂವಕರ ಒಲವ ಉಡುಗೊರೆ ಎಂಬ ಭಾವಗೀತೆಗಳ ದ್ವನಿಸುರುಳಿ ಬಿಡುಗಡೆಗೊಳಿಸಿದ ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ ಡಾ.ಮುರಿಗೆಪ್ಪ ಮಾತನಾಡಿ, ಡಾ.ಜೆ.ಪಿ.ದೊಡಮನಿ ಹಾಗೂ ಪ್ರಭಾ ಅವರ ಸಾಹಿತಿಕ ದಾಂಪತ್ಯ ಜೀವನ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಲೋಕಕ್ಕೆ ಮೌಲ್ಯವುತ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರದು ಅಪರೂಪದ ದಾಂಪತ್ಯ ಜೀವನ. ಅವರು ನಮ್ಮ ಶಿಷ್ಯರೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನ ಸುಖಕರವಾಗಿರಲಿ, ಅವರಿಂದ ಇನ್ನಷ್ಟು ಶ್ರೇಷ್ಠವಾದ ಗ್ರಂಥಗಳು ಮೂಡಿಬರಲಿ ಎಂದರು. ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಎ.ಹಡಗಲಿ ಜೆಪಿ ಅವರ ಸಂಕೀರ್ಣ ಗ್ರಂಥಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಖ್ಯಾತ ಸಾಹಿತಿ ಡಾ.ವ್ಹಿ.ಎಸ್.ಮಾಳಿ ದೊಡ್ಮನಿಯವರ ಒಟ್ಟು ಸಾಹಿತ್ಯ ಅವಲೋಕನ ಕುರಿತು ಮಾತನಾಡಿದರು. ಜಮಖಂಡಿ ಪ್ರಾಧ್ಯಾಪಕ ಡಾ. ವೈ.ವೈ.ಕೊಕ್ಕನವರ ಅಭಿನಂದನಾ ನುಡಿ ಆಡಿದರು.
ನಂತರ ಸಂಘಟನೆಯ ಪದಾಧಿಕಾರಿಗಳು, ಅಭಿಮಾನಿಗಳು, ದೊಡಮನಿ ಬಂಧುಗಳು ಡಾ.ಜೆ.ಪಿ ದೊಡಮನಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಮಹೇಶ ಕಾಂಬಳೆ ಮತ್ತು ಸಂಗಡಿಗರು ಭಾವಗೀತೆಗಳನ್ನು ಪ್ರಸ್ತುತಪಡಿಸಿದ್ದರು. ಸಾಹಿತಿ, ಶಿಕ್ಷಕಿ ಪ್ರಭಾ ಬೋರಗಾಂವಕರ ಸ್ವಾಗತಿಸಿದರು. ಡಾ.ಪ್ರಿಯಂವದಾ ಹುಲಗಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಮಣ್ಣ ದೊಡ್ಡನಿಂಗಪ್ಪಗೋಳ ನಿರೂಪಿಸಿದರು. ಡಾ. ದುರ್ಗಪ್ಪ ದೊಡ್ಡಮನಿ ವಂದಿಸಿದರು.