ಸಂವಿಧಾನ ಸರ್ವರನ್ನೂ ಒಳಗೊಂಡಿದೆ: ಶಶಿಕುಮಾರ್

KannadaprabhaNewsNetwork |  
Published : Jun 16, 2025, 01:22 AM IST
15 ಎಚ್ ಎಚ್ ಆರ್ ಪಿ 2.ಹೊಳೆಹೊನ್ನೂರಿನ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಭಾರತದ ಸಂವಿಧಾನ ಮತ್ತು ಪ್ರಸ್ತುತ ಕರ್ನಾಟಕದಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಚಟುವಟಿಕೆಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಶಿವಕುಮಾರ್, ಶಶಿಕುಮಾರ್, ಹನುಮಂತಪ್ಪ, ಹೆಚ್ಎಎಲ್ ಮಂಜುನಾಥ್,  ಕೆ.ರಂಗನಾಥ ಸೇರಿದಂತೆ ಇತರರು ಇದ್ದರು. | Kannada Prabha

ಸಾರಾಂಶ

ಭಾರತದ ಸರ್ವಶ್ರೇಷ್ಠ ಗ್ರಂಥ ಸಂವಿಧಾನವು ಸರ್ವರನ್ನೂ ಒಳಗೊಂಡಿದೆ ಎಂದು ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಶಶಿಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಭಾರತದ ಸರ್ವಶ್ರೇಷ್ಠ ಗ್ರಂಥ ಸಂವಿಧಾನವು ಸರ್ವರನ್ನೂ ಒಳಗೊಂಡಿದೆ ಎಂದು ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಶಶಿಕುಮಾರ್ ಹೇಳಿದರು.

ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಭದ್ರಾವತಿ ಘಟಕದ ವತಿಯಿಂದ ನಡೆದ ಭಾರತದ ಸಂವಿಧಾನ ಮತ್ತು ಪ್ರಸ್ತುತ ಕರ್ನಾಟಕದಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಚಟುವಟಿಕೆಗಳ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತಮಾಡಿದ ಅವರು, ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಗೂ ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ನೀಡಿದೆ. ತಳ ಸಮುದಾಯಗಳ ಏಳಿಗೆಗಾಗಿ ಮೀಸಲಾತಿಯನ್ನೂ ನೀಡಿದೆ. ಆದರೆ ಮೀಸಲಾತಿ ಕೇವಲ ಎಸ್ಸಿ ಎಸ್ಟಿ‌ಗಳಿಗೆ ಮಾತ್ರ ಇದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವವಾಗಿ ಸಂವಿಧಾನ ಓಬಿಸಿಗಳಿಗೂ ಶೇ.32 ರಷ್ಟು ಮೀಸಲಾತಿ ಒದಗಿಸಿದೆ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಹನುಮಂತಪ್ಪ ವ್ಯಕ್ತಿ ವಿಕಾಸ ಎಂಬ ವಿಷಯದ ಬಗ್ಗೆ ಮಾತನಾಡಿ, ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಸಮಾಜದ ಅಭಿವೃದ್ಧಿಗೆ ತನ್ನಿಂದಾಗಬಹುದಾದ ಕನಿಷ್ಠ ಸೇವೆಯನ್ನಾದರೂ ಸಲ್ಲಿಸಲೇ ಬೇಕು. ಭಾರತ ಸಂವಿಧಾನದ ಮೂಲ ಆಶಯದಂತೆ ದೇಶದ ಪ್ರತಿಯೊಬ್ಬರೂ ಸಮಾನತೆಯಿಂದ ಸಹಬಾಳ್ವೆಯ ಜೀವನ ನಡೆಸಬೇಕು. ಅಹಿಂಸೆ ನಮ್ಮ ಸ್ವಾತಂತ್ರ್ಯದ ಮೂಲ ಮಂತ್ರ. ನಮ್ಮ ವರ್ತನೆಗಳು ಪರರನ್ನು, ಪರಧರ್ಮಿಯರನ್ನು ನೋಯಿಸುವಂತಿರಬಾರದು. ವ್ಯಕ್ತಿ ತನ್ನ ಜೀವನದ್ದುದ್ದಕ್ಕೂ ಸಮಾನತೆ, ಸಹೋದರತೆ ತತ್ವಗಳನ್ನು ಅನುಸರಿಸಬೇಕು. ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಮಾನವ ಬಂಧುತ್ವ ವೇದಿಕೆಯ ದಾವಣಗೆರೆ ವಿಭಾಗೀಯ ಸಂಚಾಲಕ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಸಕ್ರಿಯವಾಗಿದ್ದು, ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಮುಖವಾಗಿ ಇದು ಯಾವುದೇ ರಾಜಕೀಯ, ಧಾರ್ಮಿಕ ಮತ್ತು ಜಾತಿಯ ಸಂಘಟನೆ ಅಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರನ್ನು ಒಳಗೊಂಡಿದೆ. ಈ ಸಂಘಟನೆಯ ಮೂಲಕ ರಾಜ್ಯದ ಸಾವಿರಾರು ಮಕ್ಕಳಿಗೆ ಅವರವರ ಅವಶ್ಯಕತೆಗಳಿಗನುಗುಣವಾಗಿ ಉಚಿತ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಈಗಾಗಲೇ 7 ತರಬೇತಿ ಕೇಂದ್ರಗಳನ್ನು ತೆರೆದಿದ್ದು ಐಎಎಸ್, ಐಪಿಎಸ್, ಪಿಡಿಓ, ಕಾನ್ಸ್‌ಟೇಬಲ್, ಅಗ್ನಿವೀರ್, ಎಸ್‌ಡಿಎ, ಎಫ್‌ಡಿಎ ಸೇರಿದಂತೆ ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿಯನ್ನು ನೀಡಿದೆ. ಇದರ ಫಲವಾಗಿ ಸಾವಿರಾರು ಜನರು ಇಂದು ಉದ್ಯೋಗಸ್ಥರಾಗಿದ್ದಾರೆ. ಇಷ್ಟೇ ಅಲ್ಲದೆ ಉದ್ಯಮಶೀಲತೆ, ಸ್ವಂತ ಉದ್ಯೋಗ, ಕಲೆ, ನಾಟಕ, ನಿರ್ದೇಶನಕ್ಕೆ ಬೇಕಾಗುವ ತರಬೇತಿಗಳನ್ನೂ ಸಹ ನೀಡಲಾಗುತ್ತಿದೆ. ಜನರಲ್ಲಿರುವ ಮೂಢ ನಂಬಿಕೆಯನ್ನು ತೊಡೆದುಹಾಕಿ ವಾಸ್ತವತೆಯನ್ನು ಅರ್ಥ ಮಾಡಿಸುವುದು ಈ ಸಂಘಟನೆಯ ಉದ್ದೇಶವಾಗಿದೆ. ಈ ಎಲ್ಲಾ ಕಾರಣಗಳಿಂದಲೇ ಇಂದು ಮಾನವ ಬಂಧುತ್ವ ವೇದಿಕೆ ಪ್ರತೀ ಗ್ರಾಮಗಳ ಹಂತಕ್ಕೂ ತಲುಪಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷ ಕೆ.ರಂಗನಾಥ ವಹಿಸಿದ್ದರು. ಜಿಲ್ಲಾ ಸಂಚಾಲಕ ಬಿ.ಸಂಗಮೇಶ್ ಸ್ವಾಗತಿಸಿ ನಿರೂಪಿಸಿದರು‌. ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಕೆ.ಆರ್.ಶ್ರೀಧರ್, ಅರುಣ್, ಲೋಕೇಶ್, ಆರ್.ಮಲ್ಲೇಶ್, ಮಂಜುನಾಥ್, ಸಿದ್ದಪ್ಪ, ರಫೀಕ್, ರಾಜಿಕ್, ಸಂತೋಷ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ