ಲಕ್ಷಾಂತರ ಮೌಲ್ಯದ ಕಾಫಿ ಕಳವು: ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಕಾಫಿ ಬೆಳೆಗಾರರು

KannadaprabhaNewsNetwork | Published : Feb 6, 2025 12:16 AM

ಸಾರಾಂಶ

ನಮ್ಮ ಅರೇಹಳ್ಳಿ ವ್ಯಾಪ್ತಿಯ ಕೆಲವೆಡೆ ತಮ್ಮ ಮನೆಯ ಮುಂಭಾಗ ಒಣಗಿಸಲು ರಾಶಿ ಹಾಕಿರುವಂತಹ ಕಾಫಿ ಕಳ್ಳತನವಾಗಿದ್ದು, ಕದೀಮರು ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕಳೆದು ಹೋಗಿರುವ ಕಾಫಿಯನ್ನು ರೈತರಿಗೆ ಹಿಂತಿರುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು .

ಕನ್ನಡಪ್ರಭ ವಾರ್ತೆ ಬೇಲೂರು

ಇದೇ ಮೊದಲ ಬಾರಿಗೆ ಕಾಫಿ ಧಾರಣೆಯಲ್ಲಿ ತುಸು ಸುಧಾರಣೆ ಕಂಡಿದ್ದು, ಬಹುತೇಕ ಬೆಳೆಗಾರರ ಮೊಗದಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ. ಆದರೆ ಕೆಲವೆಡೆ ಕಳ್ಳರ ಕಣ್ಣು ಕೃಷಿಕರ ಜಮೀನು ಹಾಗೂ ಕಣದತ್ತ ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಕಾಫಿ ಕಳೆದುಕೊಂಡವರು ಇದೀಗ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾರ್ವೆ, ಕಡೇಗರ್ಜೆ, ಹಿರಿಗರ್ಜೆ, ಅನುಘಟ್ಟ, ಲಕ್ಷ್ಮೀಪುರ ಗ್ರಾಮದಲ್ಲಿರುವ ರಾಮು ಜಿ ರಾವ್, ಎ.ಬಿ ಮೋಹನ್, ದೊರೆ, ಬಸವರಾಜ್, ಅನ್ಸಾರ್ ಮತ್ತು ದರ್ಶನ್ ಇವರ ಕ್ರಮವಾಗಿ ಅಂದಾಜು ಸರಿ ಸುಮಾರು 150, 50, 100, 500, 100 ಹಾಗೂ 100 ಕೆಜಿಗಳಷ್ಟು ಒಟ್ಟು ಸರಾಸರಿ 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಕಾಫಿಯನ್ನು, ಮನೆಯ ಮುಂಭಾಗದ ಕಣದಿಂದ ಕಳವು ಮಾಡಿದ್ದು, ಒಂದೆಡೆಯಾದರೆ ಇನ್ನೂ ಹಲವೆಡೆ ಕಾಫಿ ತೋಟದಲ್ಲಿ ಗಿಡಗಳಿಂದ ಹಸಿ ಕಾಫಿಯನ್ನು ಸಹ ಕುಯ್ಯುವ ಮೂಲಕ ದುಷ್ಕೃತ್ಯ ಎಸಗಿದ್ದು, ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಪಿ ಬಸವರಾಜ್ ಮಾತನಾಡಿ, ನಮ್ಮ ಅರೇಹಳ್ಳಿ ವ್ಯಾಪ್ತಿಯ ಕೆಲವೆಡೆ ತಮ್ಮ ಮನೆಯ ಮುಂಭಾಗ ಒಣಗಿಸಲು ರಾಶಿ ಹಾಕಿರುವಂತಹ ಕಾಫಿ ಕಳ್ಳತನವಾಗಿದ್ದು, ಕದೀಮರು ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕಳೆದು ಹೋಗಿರುವ ಕಾಫಿಯನ್ನು ರೈತರಿಗೆ ಹಿಂತಿರುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಶಾರಿಬ್ ಫರ್ ಹಾನ್, ಕಾರ್ಯದರ್ಶಿ ಕೆ.ಬಿ ಪುಟ್ಟರಾಜು, ಯು.ಪಿ ಮಲ್ಲೇಶ್, ಸಂಜಯ್ ,ವಿಶ್ವನಾಥ್ ನಾಯಕ್, ರಘು,ಕಿಶೋರ್ ಸೇರಿ ಸಂಘದ ಪದಾಧಿಕಾರಿಗಳು,ಬೆಳೆಗಾರರು ಹಾಜರಿದ್ದರು.

Share this article