ರೋಣ: ರೈತರು ಬೆಳೆದ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಟೊಮೆಟೋ, ಇತರ ತರಕಾರಿ, ಹಣ್ಣು, ಈರುಳ್ಳಿ ರಕ್ಷಣೆಗಾಗಿ ರೋಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ನಿರ್ಮಿಸಲಾಗುವುದು. ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ರೋಣ ಪಟ್ಟಣದ ಸೂಡಿ ವೃತ್ತದಿಂದ ಗಜೇಂದ್ರಗಡ ರಸ್ತೆ ಶಿವಾನಂದ ಮಠದ ವರೆಗೆ ₹3.5 ಕೋಟಿ ವೆಚ್ಚದಲ್ಲಿ ಹೈಟೆಕ್ ದ್ವಿಪಥ ರಸ್ತೆ ನಿರ್ಮಿಸಿ, ಹೈಮಾಸ್ಟ್, ಅಲಂಕಾರಿಕ ಲೈಟ್ ಅಳವಡಿಸಿ, ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು. ₹2 ಕೋಟಿ ವೆಚ್ಚದಲ್ಲಿ ಸರ್ಕಾರಿ ಪಿಯು ಕಾಲೇಜ ಕೊಠಡಿ ದುರಸ್ತಿ ಹಾಗೂ ₹1.5 ಕೋಟಿ ವೆಚ್ಚದಲ್ಲಿ ಎಸ್.ಆರ್. ಪಾಟೀಲ ಶಾಸಕರ ಮಾದರಿ ಕೇಂದ್ರ ಶಾಲೆ ಕೊಠಡಿಗಳನ್ನು ದುರಸ್ತಿ ಮಾಡಲಾಗುವುದು ಎಂದರು.
ರೋಣ ಪಟ್ಟಣದ ಹೃದಯಭಾಗದಲ್ಲಿರುವ ವಿಶಾಲ ಕೆರೆಗೆ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಹಾಕಿದ್ದೇವೆ. ಅಭಿವೃದ್ಧಿಗೆ ಈಗಾಗಲೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ ₹1.70 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೆ ಖನಿಜ ಅಭಿವೃದ್ಧಿ ನಿಗಮದಿಂದ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಆ ಅನುದಾನ ಈಗಲೂ ಬಳಕೆಯಾಗಿಲ್ಲ. ಮಲಪ್ರಭ ಕಾಲುವೆ ಮೂಲಕ ನೀರು ಹರಿಸಿ ಕೆರೆ ತುಂಬಿಸಲಾಗುವುದು. ಜತೆಗೆ ಕೆರೆ ಸೌಂದರ್ಯ ಹೆಚ್ಚಳಕ್ಕೆ, ವಾಯುವಿಹಾರಕ್ಕೆ ಯೋಗ್ಯವಾದ ತಾಣವನ್ನಾಗಿಸಲಾಗುವುದು. ಈ ಕುರಿತು ಅನೇಕ ಪ್ಲ್ಯಾನ್‌ಗಳನ್ನು ಹಾಕಿಕೊಳ್ಳಲಾಗಿದೆ. ಆದ್ದರಿಂದ ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದರು.ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ, ಸದಸ್ಯ ಮಲ್ಲಯ್ಯ ಮಹಾಪುರುಷಮಠ, ವಿದ್ಯಾ ದೊಡ್ಡಮನಿ, ಬಸಮ್ಮ ಕೊಪ್ಪದ, ಲಕ್ಷ್ಮೀ ಗಡಗಿ, ಬಸವರಾಜ ಜಗ್ಗಲ, ಜಿಲ್ಲಾ ವಿಕಲಚೇನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಜಿಲ್ಲಾ ಕಲ್ಯಾಣ ಅಧಿಕಾರಿ ಮಹಾಂತೇಶ ಕುರಿಯವರ, ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಬಸವರಾಜ ಓಲಿ ಉಪಸ್ಥಿತಿತರಿದ್ದರು. ಯೂಸುಫ್ ಇಟಗಿ ವಂದಿಸಿದರು.
ವಿಶೇಷ ತರಬೇತಿ ಶಿಬಿರ: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮುಂದಿನ ನಡೆ ಏನು? ಭವಿಷ್ಯ ಉಜ್ವಲಗೊಳ್ಳಲು ಸುಲಭ ಆಯ್ಕೆ ದಾರಿ ಏನು? ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರೋಣ ಪಟ್ಟಣದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ವತಿಯಿಂದ ಕಾಲೇಜ್ ಆವರಣದಲ್ಲಿ ವಿಶೇಷ ತರಬೇತಿ ಶಿಬಿರವನ್ನು ಜೂ. 2ರಂದು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಹಮ್ಮಿಕೊಳ್ಳಲಾಗುವುದು. ಶಿಬಿರದಲ್ಲಿ ಧಾರವಾಡ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ನುರಿತ ತಜ್ಞರ ಭಾಗವಹಿಸಿ ತರಬೇತಿ ನೀಡಲಿದ್ದಾರೆ. ಆದ್ದರಿಂದ ರೋಣ ಹಾಗೂ ಗಜೇಂದ್ರಗಡ ಸೇರಿದಂತೆ ರೋಣ ಮತಕ್ಷೇತ್ರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.