ಕನ್ನಡಪ್ರಭ ವಾರ್ತೆ ತುರುವೇಕೆರೆ
ಬಾಡೂಟದ ಸೇವೆ ಇಲಾಖಾ ಆವರಣದಲ್ಲಿ ಅಲ್ಲದೇ ಇಲಾಖೆಯ ಒಳಗೂ ನಡೆದಿದೆ. ಕಚೇರಿಯ ಆವರಣದಲ್ಲಿ ಹತ್ತಾರು ಕಾರುಗಳು, ಸರ್ಕಾರಿ ಜೀಪುಗಳು ಬೀಡುಬಿಟ್ಟಿದ್ದವು. ಈ ಕುರಿತಂತೆ ಅಲ್ಲಿನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾರ್ವಜನಿಕ ಸ್ಥಳವಾಗಿರುವ ಇಲ್ಲಿ ಅಲ್ಲಿನ ಅಧಿಕಾರಿಗಳು ತಮ್ಮ ಸ್ವಂತ ಸ್ಥಳವೆಂಬಂತೆ ಇಂತಹ ಕಾರ್ಯಕ್ರಮಕ್ಕೆ ಆಸ್ಪದ ನೀಡಿದ್ದಾದರೂ ಹೇಗೆ. ಇಂತಹ ಕಾರ್ಯಕ್ರಮಗಳನ್ನು ನಡೆಸಲು ಹಿರಿಯ ಅಧಿಕಾರಿಗಳು ಅನುಮತಿ ನೀಡಿದ್ದಾರೆಯೇ?. ಸಾರ್ವಜನಿಕರಿಗೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವರೇ? ಎಂದು ಅಮ್ಮಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿದ್ದಗಂಗಯ್ಯ ಪ್ರಶ್ನಿಸಿದ್ದಾರೆ. ನೂರಾರು ಮಂದಿ ಬಾಡೂಟದೊಂದಿಗೆ ಪಾನಕಗೋಷ್ಠಿಯನ್ನೂ ನಡೆಸಿದ್ದಾರೆ. ಬಾಡೂಟದ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಕೆಲವು ಮಂದಿ ಕಚೇರಿಯ ಆವರಣಕ್ಕೆ ಬಂದು ಫೋಟೋ ಮತ್ತು ವಿಡಿಯೋ ತೆಗೆಯುವ ವೇಳೆ ಬಾಡೂಟದ ವಸ್ತುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗಲಿಲ್ಲ. ಆದರೆ ಪಾನಕದ ವಸ್ತುಗಳನ್ನು ಕೂಡಲೇ ಬೇರೆಡೆಗೆ ಸಾಗಿಸಿದರು ಎಂದು ತಿಳಿದುಬಂದಿದೆ. ಲೋಕೋಪಯೋಗಿ ಇಲಾಖಾ ಇಎಎ ನಿವೃತ್ತಿಗೆ ಮೊದಲೇ ತಮ್ಮ ಕಚೇರಿಯಲ್ಲಿ ಬಾಡೂಟದ ವ್ಯವಸ್ಥೆ ಮಾಡಿದ್ದ ಬಗ್ಗೆ ಶಾಸಕ ಎಂ.ಟಿ.ಕೃಷ್ಣಪ್ಪನವರ ಕಿವಿಗೂ ವಿಷಯ ಮುಟ್ಟಿದೆ. ಕೆಂಡಾಮಂಡಲರಾದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆಂದು ತಿಳಿದುಬಂದಿದೆ. ಲೋಕೋಪಯೋಗಿ ಇಲಾಖಾ ಆವರಣದಲ್ಲೇ ಹುತ್ತವೊಂದು ಇದ್ದುದರಿಂದ ಅಲ್ಲೇ ನಾಗದೇವರ ಸಣ್ಣ ದೇವಾಲಯವನ್ನು ಕಟ್ಟಲಾಗಿದೆ. ಅಲ್ಲಿ ದಿನವೂ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇಂತಹ ಪವಿತ್ರ ಸ್ಥಳದಲ್ಲಿ ಬಾಡೂಟ ನಡೆಸಿರುವುದು ಆಸ್ತಿಕರ ಮನಸ್ಸಿಗೆ ನೋವು ತರಿಸಿದೆ.