ಹೊರಗುತ್ತಿಗೆ ಸಿಬ್ಬಂದಿ ಕಾಯಂ ಮಾಡಲು ಆಗ್ರಹಿಸಿ ಪೌರ ನೌಕರರ ಪ್ರತಿಭಟನೆ

KannadaprabhaNewsNetwork |  
Published : May 29, 2025, 01:39 AM IST
ರಾಜ್ಯ ಪೌರ ನೌಕರರ ಸಂಘ ಹಾವೇರಿ ಶಹರ ಘಟಕದ ಮುಖಂಡರು ನಗರಸಭೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂ ಮಾಡಬೇಕು.

ಹಾವೇರಿ: ಪೌರ ನೌಕರರನ್ನು ನೇರ ಪಾವತಿಗೆ ಒಳಪಡಿಸಿ ಸರ್ಕಾರಿ ನೌಕರರೆಂದು ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರ ಸಂಘದ ನಗರ ಘಟಕದಿಂದ ಬುಧವಾರ ಇಲ್ಲಿಯ ನಗರಸಭೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘವು ರಾಜ್ಯಾದ್ಯಂತ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಬಲಿಸಿ ಹಾವೇರಿ ನಗರಸಭೆ ಪೌರ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಕಸ ಸಂಗ್ರಹ, ಕಸ ವಿಲೇವಾರಿ ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಹಾಗೂ ಕಚೇರಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಪೌರ ನೌಕರರ ಸಂಘದ ಶಹರ ಘಟಕದ ಅಧ್ಯಕ್ಷ ಚಂದ್ರು ಬಿದರಿ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂ ಮಾಡಬೇಕು. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಸಲ್ಲದು. ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. 25ರಿಂದ 30 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿ, ಲೋಡರ್ಸ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್ ಪೌರಕಾರ್ಮಿಕರು, ಸೂಪರ್ ವೈಸರ್ಸ್, ಕಂಪ್ಯೂಟರ್ ಆಪರೇಟರ್‌ಗಳು, ಜ್ಯೂನಿಯರ್ ಪ್ರೋಗ್ರಾಂಸ್ ಸಿಬ್ಬಂದಿಯನ್ನು ಕಾಯಂ ಮಾಡಬೇಕು. ಸ್ವಚ್ಛತೆ, ಕಸ ಸಂಗ್ರಹ, ವಿಲೇವಾರಿ, ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆ ಸ್ಥಗಿತ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದೇವೆ. ಎಲ್ಲ ನೌಕರರಿಗೂ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಾಲತೇಶ ತಿಗಳಣ್ಣವರ, ನಗರಸಭೆ ಸಿಬ್ಬಂದಿಯವರಾದ ರಮೇಶ ಮುಂಜೋಜಿ, ಶೋಭಾ ಉದಗಟ್ಟಿ, ಪೌರ ನೌಕರರ ಸಂಘದ ಗಿರೀಶ ಹರವಿ, ವಿನಯ ಬಸೇಗಣ್ಣಿ, ಬಿಷ್ಟಣ್ಣ ಭಜಂತ್ರಿ, ಮಹೇಶ ಮಾಂಗಲೇನವರ, ನಾಗರಾಜ ಮರಡಿಮನಿ, ಶಿವಪುತ್ರಪ್ಪ ದೇವಸೂರ, ನಾರಾಯಣಸಿಂಗ್ ರಜಪೂತ, ರಾಜು ಕಾಟೇನಹಳ್ಳಿ, ರಾಜು ಹೊಸಮನಿ, ನಾಗರಾಜ ನೆಗಳೂರ, ರಾಜು ಮಾಳಗಿ ಸೇರಿದಂತೆ ಅನೇಕರು ಇದ್ದರು. 2ನೇ ದಿನಕ್ಕೆ ಕಾಲಿಟ್ಟ ಪೌರ ನೌಕರರ ಮುಷ್ಕರ

ರಾಣಿಬೆನ್ನೂರು: ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ನಗರಸಭೆ ಪೌರ ನೌಕರರು ನಗರಸಭೆ ಕಚೇರಿ ಮುಂಭಾಗದಲ್ಲಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ 2ನೇ ದಿನಕ್ಕೆ ಕಾಲಿಟ್ಟಿದೆ.ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು, ಪೌರ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಜತೆಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಈಗಿನ ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಹಿಂದೇಟು ಹಾಕುತ್ತಿದೆ. ಕೂಡಲೇ ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ನಾಗರಿಕ ಸೇವಾ ನಿಯಮ ಅಧಿನಿಯಮ 1978ನ್ನು ಪೌರ ಸೇವಾ ನೌಕರರಿಗೆ ಅನ್ವಯಿಸಬೇಕು ಹಾಗೂ ಪಂಚಾಯತ್‌ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ರೀತಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಪರಿಗಣಿಸಬೇಕು. ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ಪೌರ ಸೇವಾ ನೌಕರರಿಗೆ ಒದಗಿಸಲು ಕಾಯ್ದೆ ಮತ್ತು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡುವುದು ಸೇರಿದಂತೆ 19 ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವುದು ಪ್ರತಿಭಟನಾಕಾರರು ಆಗ್ರಹವಾಗಿದೆ.

ಸ್ಥಳೀಯ ಸಂಘಟನೆಯ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಾರ್ಯದರ್ಶಿ ಮಾಧವ ಸಾತೇನಹಳ್ಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಮರಿಗೌಡ್ರ, ಪ್ರಭು ಬಾಲೆಹೊಸೂರ, ಎಂ.ಆರ್. ಮಂಜುನಾಥ, ಗಣೇಶ ಪಾಸಿಗಾರ, ವಾಣಿಶ್ರೀ, ನಿಂಗಪ್ಪ ಮಧುಕರಿಯಪ್ಪನವರ, ದಿಳ್ಳೆಪ್ಪ ಅಂಕಸಾಪುರ, ನಿಖಿತಾ ಮೆಣಸಿನಹಾಳ, ಬಿ.ವಸಂತ, ಎಸ್.ಪಿ. ದೊಡ್ಡಮನಿ, ಎನ್.ಬಿ. ಕೋರಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ