ಮುಂಡರಗಿ ಪುರಸಭೆ ಪೌರ ನೌಕರರು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಬುಧವಾರ ಪುರಸಭೆ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಭೇಟಿ ನೀಡಿ, ಬೆಂಬಲ ಸೂಚಿಸಿದರು.
ಮುಂಡರಗಿ: ಸರ್ಕಾರ ಕೂಡಲೇ ಪೌರ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಒತ್ತಾಯಿಸಿದರು.
ಸ್ಥಳೀಯ ಪುರಸಭೆ ಪೌರ ನೌಕರರು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಬೆಂಬಲಿಸಿ ಅವರು ಮಾತನಾಡಿದರು. ಸಮಾನ ಕೆಲಸಕ್ಕೆ ಸಮಾನ ವೇತನ ಪೌರ ನೌಕರರಿಗೆ ಅನ್ವಯಿಸುತ್ತಿಲ್ಲ ಹಾಗೂ ಕಾಯಂ ನೇಮಕಾತಿ ಇಲ್ಲದೆ ಸರ್ಕಾರಿ ನೌಕರರ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಪುರಸಭೆ ಪೌರ ನೌಕರರ ಬೇಡಿಕೆ ಈಡೇರುತ್ತಿಲ್ಲ, ಸ್ವಚ್ಛತೆ ಸೇರಿದಂತೆ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಅನೇಕ ಕೆಲಸಗಳನ್ನು ಶ್ರಮವಹಿಸಿ ಮಾಡಿದರೂ ಅದಕ್ಕೆ ತಕ್ಕಂತೆ ವೇತನ ಇಲ್ಲ. ಕೆಸಿಎಸ್‌ಆರ್ ನಿಯಮಾವಳಿಯಂತೆ ಸೌಲಭ್ಯಗಳಿಲ್ಲ. ಹೀಗಾಗಿ ಹಲವು ಕಷ್ಟಗಳಲ್ಲಿಯೇ ಹೆಚ್ಚು ಕೆಲಸ ಮಾಡುವ ಅನಿವಾರ್ಯತೆ ಇದೆ. ಆದ್ದರಿಂದ ಸರ್ಕಾರ ಕೂಡಲೇ ಇವರ ಬೇಡಿಕೆ ಈಡೇರಿಸಬೇಕು ಎಂದರು.
ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಪೌರ ನೌಕರರಿಗೆ ಬೆಂಬಲಿಸಿ ಮಾತನಾಡಿ, ಪೌರಸೇವಾ ನೌಕರರು ನಿತ್ಯ ಬೆಳಗ್ಗೆಯಿಂದ ಸಂಜೆ ವರೆಗೂ ಇಡೀ ಪಟ್ಟಣವನ್ನು ಸ್ವಚ್ಛತೆ ಮಾಡುವಲ್ಲಿ ನಿರತರಾಗಿರುತ್ತಾರೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸುವ ಇವರ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಲು ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ನಿರ್ಮಲಾ ನಾಗರಾಜ ಕೊರ್ಲಹಳ್ಳಿ, ನೌಕರರ ಬೇಡಿಕೆಗಳು ಯೋಗ್ಯವಾಗಿದ್ದು, ಅವರ ಜತೆಗೆ ನಾವೆಲ್ಲ ಸಂಪೂರ್ಣ ಇದ್ದೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸಂಘದ ಅಧ್ಯಕ್ಷ ಮೈಲಪ್ಪ ದೊಡ್ಡಮನಿ ಪುರಸಭೆ ಸದಸ್ಯ ಪ್ರಹ್ಲಾದ ಹೊಸಮನಿ, ಪವನ್ ಮೇಟಿ, ಜ್ಯೋತಿ ಹಾನಗಲ್, ಬಸವರಾಜ ನವಲಗುಂದ, ಮಹ್ಮದ ರಫೀಕ್ ವಡ್ಡಟ್ಟಿ, ಧ್ರುವಕುಮಾರ ಹೂಗಾರ, ಪಾಟೀಲ ಹಾಗೂ ಪೌರ ನೌಕರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.