ಧಾರವಾಡ: ಸುಮಾರು ಎರಡು ತಿಂಗಳ ಕಾಲ ಬೇಸಿಗೆ ರಜೆಯ ಮಜಾ ಮುಗಿಸಿದ ಮಕ್ಕಳು ಇದೀಗ ಮತ್ತೆ ಶಾಲೆಯ ಹೊಸ್ತಿಲು ತುಳಿಯುವ ತವಕದಲ್ಲಿದ್ದಾರೆ. ಶಿಕ್ಷಣ ಇಲಾಖೆಯು 2025-26ನೇ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಶುರು ಮಾಡಲು ಆದೇಶಿಸಿದ್ದು, ಮೇ 29ರಂದು ಪೂರ್ವ ಸಿದ್ಧತೆ ಹಾಗೂ ಮೇ 30 ರಿಂದ ಶಾಲಾ ಪ್ರಾರಂಭೋತ್ಸವಕ್ಕೆ ಶಾಲೆಗಳು ಅಣಿಯಾಗಿವೆ.
ನಾಳೆ ಪ್ರಾರಂಭೋತ್ಸವ: ಇನ್ನು ಮೇ 30ರಂದು ಶಾಲೆಗೆ ತಳಿರು ತೋರಣ ಕಟ್ಟಿ ಡೋಲು, ನಗಾರಿ ಮೂಲಕ ಮಕ್ಕಳನ್ನು ಕರೆತಂದು ಗುಬಾಬಿ ಹೂ ನೀಡಿ ಸ್ವಾಗತಿಸಲು ಸರ್ಕಾರಿ ಶಾಲೆಗಳು ಕಾರ್ಯೋನ್ಮುಖವಾಗಿವೆ. ಬಿಸಿಯೂಟ ಸಿಹಿಯೊಂದಿಗೆ ಪ್ರಾರಂಭಿಸುವುದು, ಶಾಲಾ ಸಮವಸ್ತ್ರ, ಪುಸ್ತಕಗಳ ಹಂಚಿಕೆಯೂ ಅಂದೇ ಆಗಲಿದೆ. ಹಾಗೆಯೇ, ಶಾಲೆಗಳು ಎಷ್ಟರ ಮಟ್ಟಿಗೆ ಆರಂಭವಾಗಿವೆ? ಎಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ? ಹೇಗೆಲ್ಲಾ ಪಾಠ- ಪ್ರವಚನ ನಡೆಯುತ್ತಿದೆ? ಸೌಲಭ್ಯಗಳ ಕೊರತೆ ಇದೆಯೇ? ಪಠ್ಯಪುಸ್ತಕ, ಸಮವಸ್ತ್ರ ಹಂಚಿಕೆ ಆಗಿದೆಯೇ? ಎಂಬುದನ್ನು ಅರಿಯಲು ಶಿಕ್ಷಣ ಇಲಾಖೆ ಜೂ.1 ರಿಂದ 9ರ ವರೆಗೆ ಅಧಿಕಾರಿಗಳು ಮಿಂಚಿನ ಸಂಚಾರ ಹಮ್ಮಿಕೊಂಡಿದ್ದು ವಿಶೇಷ.
ಮಕ್ಕಳ ಸುರಕ್ಷತೆ ಇರಲಿ ಆದ್ಯತೆ: ಹಾಗೆಯೇ ಮಳೆಗಾಲದ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳ ಸುರಕ್ಷತೆಗೆ ಆದ್ಯತೆ ನೀಡಲು ಶಿಕ್ಷಕರುಗಳಿಗೆ ಸೂಚನೆ ನೀಡಿರುವ ಶಿಕ್ಷಣ ಇಲಾಖೆಯು, ಲಭ್ಯ ಇರುವ ಅನುದಾನ ಬಳಸಿಕೊಂಡು ಶಾಲಾ ಕೊಠಡಿಗಳ ದುರಸ್ತಿಗೆ ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ಅಸುರಕ್ಷಿತ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸುವಂತಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತೊಂದರೆ ಇದ್ದಲ್ಲಿ ದೂರು ನೀಡುವುದು ಸೇರಿದಂತೆ ಮಕ್ಕಳ ವಿಷಯದಲ್ಲಿ ಅಲಕ್ಷ್ಯ ತೋರಿದಲ್ಲಿ ಅನಾಹುತ ಸಂಭವಿಸಿದರೆ ಶಿಕ್ಷಕರನ್ನೇ ಹೊಣೆಗಾರಿಕೆ ಮಾಡಿ ಶಿಕ್ಷಣ ಇಲಾಖೆಯು ಎಚ್ಚರಿಕೆ ನೀಡಿದೆ.ಪ್ರತಿ ಬಾರಿ ಕೆಲವು ಮಕ್ಕಳು ಶಾಲೆ ಬಿಡುತ್ತಿದ್ದು, ಅಭಿಯಾನದ ಮೂಲಕ ಅವರನ್ನು ಮರಳಿ ಶಾಲೆಗೆ ಕರೆತರುವ ಕಾರ್ಯ ಇಲಾಖೆ ಮಾಡುತ್ತಿದೆ. ಅದೇ ರೀತಿ ಈ ಬಾರಿಯೂ ಮೇ 31ರ ವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ನಡೆಸಿ ಜೂ. 2 ರಿಂದ 30ರ ವರೆಗೆ ಮನೆ ಮನೆ ಭೇಟಿ ಮಾಡಿ ಶಾಲೆಯಿಂದ ಹೊರಗಳಿದ ಮಕ್ಕಳನ್ನು ಶಾಲೆಗೆ ಕರತರುವ ಕಾರ್ಯಕ್ಕೂ ಇಲಾಖೆ ಮುಂದಾಗಿದೆ.
ಸರ್ಕಾರಿ ಶಾಲೆಗೆ ಬನ್ನಿ: ಪ್ರಸಕ್ತ ಸಾಲಿನ ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದು, ಮಕ್ಕಳು ಹಾಗೂ ಶಿಕ್ಷಕರು ನಗುಮುಖದಿಂದ ಶಾಲೆಗಳತ್ತ ಬರಲಿ ಎಂಬುದೇ ನಮ್ಮ ಆಶಯ. ಈಗಾಗಲೇ 1,31,152 ಸಮವಸ್ತ್ರಗಳ ಬೇಡಿಕೆ ಪೈಕಿ ಶೇ. 100ರಷ್ಟು ವಿತರಿಸಲಾಗಿದೆ. ಜತೆಗೆ ಶೇ. 82.31ರಷ್ಟು ಉಚಿತ ಪಠ್ಯಪುಸ್ತಕಗಳು ಹಾಗೂ ಶೇ. 83.31ರಷ್ಟು ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ವಿತರಣೆಯಾಗಿವೆ. ಗುರುವಾರ ಪೂರ್ವಸಿದ್ಧತೆ, ಶುಕ್ರವಾರ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಹೆಚ್ಚೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಲಿ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಹೇಳಿದರು.