ವಿನಯ ಕುಲಕರ್ಣಿ, ತಮಟಗಾರ ಮಧ್ಯೆ ಶೀತಲ ಸಮರ!

KannadaprabhaNewsNetwork | Published : Jul 16, 2024 12:35 AM

ಸಾರಾಂಶ

ಪಟಾಕಿ ಹಾರಿಸಲು ಯಾವುದೇ ಕಾನೂನು ಅಡ್ಡಿ ಇಲ್ಲ. ಉದ್ದೇಶ ಪೂರ್ವಕವಾಗಿ ಶಾಸಕ ವಿನಯ ಕುಲಕರ್ಣಿ ಆದೇಶದ ಮೇರೆಗೆ ಮುಸ್ಲಿಂ ಅಮಾಯಕನನ್ನು ಬಂಧಿಸಲಾಗಿದೆ ಎಂದು ಅಂಜುಮನ್‌ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್‌ ತಮಟಗಾರ ಸೇರಿದಂತೆ ಮುಸ್ಲಿಂ ಮುಖಂಡರು ಮಧ್ಯಾಹ್ನದ ಹೊತ್ತಿಗೆ ಉಪ ನಗರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಧಾರವಾಡ:

ಕಾಂಗ್ರೆಸ್‌ ಪಕ್ಷದಲ್ಲಿ ಅನೇಕ ಬಣಗಳಿರುವುದು ಹೊಸದೇನಲ್ಲ. ಹೀಗಾಗಿಯೇ ಜಿಲ್ಲೆಯಲ್ಲಿ ನಡೆಯುವ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಒಗ್ಗಟ್ಟಾಗಿ ಶ್ರಮಿಸಲು ಸಾಧ್ಯವಾಗದೇ ವಿಫಲತೆ ಕಾಣುವುದು ರೂಢಿಯಾಗಿದೆ. ಇದೀಗ ಮಾಜಿ ಸಚಿವ, ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹಾಗೂ ಅಂಜುಮನ್‌ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡರೂ ಆದ ಇಸ್ಲಾಯಿಲ್‌ ತಮಟಗಾರ ಮಧ್ಯೆ ಶೀತಲ ಸಮರ ಶುರುವಾಗಿದೆ.

ಹಲವು ಕಾರಣಗಳಿಂದ ಮೊದಲಿನಿಂದಲೂ ಒಳಗೊಳಗೆ ಉಭಯ ನಾಯಕರ ಮಧ್ಯೆ ಅಸಮಾಧಾನದ ಹೊಗೆ ಇದ್ದರೂ ಕಳೆದ ಎರಡು ದಿನಗಳ ಹಿಂದಷ್ಟೇ ನಡೆದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆ ಶೀತಲ ಸಮರಕ್ಕೆ ಕಾರಣವಾಗಿದೆ.

ಈ ಚುನಾವಣೆಯಲ್ಲಿ ಸ್ಪರ್ಧಿಸಿದ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಪರಾಭವಗೊಂಡಿದ್ದರು. ಇಸ್ಮಾಯಿಲ್‌ ತಮಟಗಾರ ಬೆಂಬಲಿಗನಾದ ರಾಜೇಸಾಬ ನದಾಫ್‌ ಶಿವಲೀಲಾ ಸೋತಿರುವುದಕ್ಕೆ ಬಾರಾಕೊಟ್ರಿಯಲ್ಲಿರುವ ಅವರ ಮನೆ ಎದುರು ಸೋಮವಾರ ಪಟಾಕಿ ಸಿಡಿಸಿದ್ದಾನೆ. ಅಲ್ಲಿಯೇ ಇದ್ದ ಪೊಲೀಸರು ಆತನನ್ನು ಬಂಧಿಸಿದ್ದರು.

ಪಟಾಕಿ ಹಾರಿಸಲು ಯಾವುದೇ ಕಾನೂನು ಅಡ್ಡಿ ಇಲ್ಲ. ಉದ್ದೇಶ ಪೂರ್ವಕವಾಗಿ ಶಾಸಕ ವಿನಯ ಕುಲಕರ್ಣಿ ಆದೇಶದ ಮೇರೆಗೆ ಮುಸ್ಲಿಂ ಅಮಾಯಕನನ್ನು ಬಂಧಿಸಲಾಗಿದೆ ಎಂದು ಅಂಜುಮನ್‌ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್‌ ತಮಟಗಾರ ಸೇರಿದಂತೆ ಮುಸ್ಲಿಂ ಮುಖಂಡರು ಮಧ್ಯಾಹ್ನದ ಹೊತ್ತಿಗೆ ಉಪ ನಗರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೆಎಂಎಫ್‌ ಅಧ್ಯಕ್ಷರಾದ ಶಂಕರ ಮುಗದ ಅವರ ಅಭಿಮಾನಿಯಾಗಿ ರಾಜೇಸಾಬ್‌ ನದಾಫ್‌ ಪಟಾಕಿ ಹಾರಿಸಿದ್ದಾನೆ. ಅಷ್ಟಕ್ಕೆ ಆತನನ್ನು ಆತಂಕವಾದಿ ಎನ್ನುವ ರೀತಿಯಲ್ಲಿ ಬಂಧಿಸಿದ್ದು ತಪ್ಪು ಎಂದು ಇಸ್ಮಾಯಿಲ್‌ ತಮಟಗಾರ ಪೊಲೀಸರೊಂದಿಗೆ ವಾದ ನಡೆಸಿದರು. ನಮ್ಮ ವಿರೋಧಿಗಳ ಬೆಂಬಲಿಗರು ಹಲವು ಬಾರಿ ನಮ್ಮ ಮನೆ ಮುಂದೆಯೂ ಪಟಾಕಿ ಹಾರಿಸಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆಯೇ? ಹಾಗಾದರೆ, ಇನ್ಮುಂದೆ ನಾವು ಕೂಡ ಪಟಾಕಿ ಹಾರಿಸಿದವರ ವಿರುದ್ಧ ದೂರು ಕೊಡುತ್ತೇವೆ. ಪೊಲೀಸರು ದೂರು ಸ್ವೀಕರಿಸುತ್ತಾರಾ? ಎಂದು ಪ್ರಶ್ನಿಸಿದರು. ಜತೆಗೆ, ರಾಜೇಸಾಬ್ ನಮ್ಮ ಅಂಜುಮನ್ ಸಂಸ್ಥೆ ಸದಸ್ಯನಾಗಿದ್ದರಿಂದ ನಾವು ಠಾಣೆಗೆ ಬಂದಿದ್ದೇವೆ. ಪೊಲೀಸರು ಯಾವ ಕೇಸ್ ಹಾಕುತ್ತಾರೆ ಎನ್ನುವುದರ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಇಸ್ಮಾಯಿಲ್‌ ತಮಟಗಾರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರಿದ್ದರು ಎಂದು ವಿನಯ ಮನೆ ಎದುರು ಅಂಜುಮನ್‌ ಇಸ್ಲಾಂ ಸದಸ್ಯರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Share this article