ಕಾರವಾರದಲ್ಲಿ ಭಾರಿ ಮಳೆಗೆ ಮನೆಗಳು ಜಲಾವೃತ

KannadaprabhaNewsNetwork | Published : Jul 16, 2024 12:35 AM

ಸಾರಾಂಶ

ಕಾರವಾರ ತಾಲೂಕಿನ ಅರಗಾ, ತೋಡೂರು, ಚೆಂಡಿಯಾ, ಪೋಸ್ಟ್ ಚೆಂಡಿಯಾ ಮತ್ತಿತರ ಕಡೆ ನೀರು ಸರಾಗವಾಗಿ ಹರಿದು ಹೋಗದೆ ಮನೆಗಳು ಜಲಾವೃತವಾದವು.

ಕಾರವಾರ: ತಾಲೂಕಿನಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಚೆಂಡಿಯಾ, ಅರಗಾ, ತೋಡೂರು ಸೇರಿದಂತೆ ಹಲವೆಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು.ನಗರದ ಹಬ್ಬುವಾಡ ಫಿಶರೀಸ್ ಕಾಲನಿಯಲ್ಲಿ ಗುಡ್ಡದಿಂದ ಉರುಳಿ ಬಂದ ಬಂಡೆಗಲ್ಲು ಮಾಜಿ ಯೋಧ ವಿನೋದ ಉಳ್ವೇಕರ ಎಂಬವರ ಮನೆಗೆ ಬಡಿದ ಪರಿಣಾಮ ಹಿಂಬದಿ ಗೋಡೆ ಜಖಂಗೊಂಡಿದೆ. ಮಳೆ ಮುಂದುವರಿದರೆ ಮತ್ತೆ ಗುಡ್ಡ ಕುಸಿತ ಆಗುವ ಆತಂಕದಲ್ಲಿ ಸ್ಥಳೀಯ ನಿವಾಸಿಗಳಿದ್ದಾರೆ.ತಾಲೂಕಿನ ಅರಗಾ, ತೋಡೂರು, ಚೆಂಡಿಯಾ, ಪೋಸ್ಟ್ ಚೆಂಡಿಯಾ ಮತ್ತಿತರ ಕಡೆ ನೀರು ಸರಾಗವಾಗಿ ಹರಿದು ಹೋಗದೆ ಮನೆಗಳು ಜಲಾವೃತವಾದವು.ನೌಕಾನೆಲೆ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಮಳೆ‌ ನೀರು ಸರಾಗವಾಗಿ ಹರಿದು ಸಮುದ್ರ ಸೇರಲು ಅವಕಾಶವಿಲ್ಲದ ಕಾರಣ ಚೆಂಡಿಯಾ, ಅರಗಾ, ಚೆಂಡಿಯಾ ಐಸ್ ಫ್ಯಾಕ್ಟರಿ ಒಳಗೊಂಡು ಹಲವೆಡೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಪ್ರತಿ ಮಳೆಯಲ್ಲೂ ತೊಂದರೆ ಆಗುತ್ತಿದೆ ಎಂದು ಆಪಾದಿಸಿ ನೌಕಾನೆಲೆ ವಿರುದ್ಧ ಚೆಂಡಿಯಾ ಐಸ್ ಫ್ಯಾಕ್ಟರಿ ವ್ಯಾಪ್ತಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು‌.ಪ್ರತಿಭಟಿಸುತ್ತಿದ್ದ ನೌಕಾನೆಲೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು.

ನೌಕಾನೆಲೆ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಮಳೆ ನೀರು ಹರಿದುಹೋಗುವ ಕಾಲುವೆಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿ ನಡೆಸಿದರು.ಭಾರಿ ಮಳೆಯಿಂದಾಗಿ ತಾಲೂಕಿನ ಮಂದ್ರಾಳಿ ಬಳಿ ಗುಡ್ಡದ ಮಣ್ಣು ಕೊಚ್ಚಿಕೊಂಡು ರಸ್ತೆಗೆ ಬಂದಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ತಹಸೀಲ್ದಾರ್ ನಿಶ್ಚಲ ನರೋನ್ಹಾ ಇದ್ದರು.

ಬಂಡೆಗಲ್ಲು ಉರುಳಿ ಮನೆಗೋಡೆಗೆ ಹಾನಿ

ಫಿಶರೀಸ್ ಕಾಲನಿ ಬಳಿ ಮನೆ ಖರೀದಿಸಿದ್ದ ಮಾಜಿ ಯೋಧ ವಿನೋದ್ ಉಳ್ವೇಕರ್ ಎಂಬವರ ಮನೆಗೆ ಬಂಡೆಗಲ್ಲು ಉರುಳಿದ್ದು ಗೋಡೆ ಹಾಗೂ ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಸೋಮವಾರ ನಸುಕಿನಲ್ಲಿ ದೊಡ್ಡದಾದ ಶಬ್ದವಾಗಿದ್ದು, ಎದ್ದು ನೋಡಿದಾಗ ಮನೆ ಹಿಂಭಾಗದ ಗುಡ್ಡದಿಂದ ಬೃಹತ್ ಬಂಡೆಗಲ್ಲು ಉರುಳಿ ಬಂದು ಮನೆ ಕೊಠಡಿಗೆ ಬಡಿದಿತ್ತು. ಅದೃಷ್ಟವಶಾತ್ ಆ ಕೊಠಡಿಯಲ್ಲಿ ಯಾರೂ ಇರಲ್ಲಿಲ್ಲ. ಬೃಹತ್ ಮರ, ಬಂಡೆಗಳು ಜಾರಿ ಬಂದು ಮನೆ ಬಳಿ ನಿಂತಿದ್ದು, ಯಾವ ಕ್ಷಣದಲ್ಲಾದರೂ ಮರ‌ ಊರುಳುವ ಹಾಗೂ ಗುಡ್ಡ ಕುಸಿಯುವ ಆತಂಕವಿದೆ. ಇಂದೂ 10 ತಾಲೂಕಿನ ಶಾಲಾ- ಕಾಲೇಜಿಗೆ ರಜೆ

ಕಾರವಾರ: ಜಿಲ್ಲೆಯ ಮುಂಡಗೋಡ, ಹಳಿಯಾಳ ಹೊರತುಪಡಿಸಿ ಉಳಿದ ತಾಲೂಕುಗಳ ಶಾಲಾ- ಕಾಲೇಜಿಗೆ ಜು. ೧೬ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ.ಭಾರಿ ಮಳೆ ಸುರಿಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಮಲೆನಾಡಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ದಾಂಡೇಲಿ, ಕರಾವಳಿಯ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ, ಪಪೂ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Share this article