ಮಾದಿಗರ ದತ್ತಾಂಶ ಸಂಗ್ರಹಿಸಿ ಆಯೋಗಕ್ಕೆ ಸಲ್ಲಿಸಿ: ಕೇಂದ್ರದ ಮಾಜಿ ಸಚಿವ ಆನೇಕಲ್ ನಾರಾಯಣಸ್ವಾಮಿ

KannadaprabhaNewsNetwork |  
Published : Jan 12, 2025, 01:17 AM IST
11ಡಿಡಬ್ಲೂಡಿ5ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ಪ್ರಾಯೋಗಿಕ ದತ್ತಾಂಶ ಸಂಗ್ರಹ ಕುರಿತ ಕಾರ್ಯಾಗಾರದಲ್ಲಿ ಮಹಾತ್ಮರ ಭಾವಚಿತ್ರಗಳಿಗೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಪರಿಶಿಷ್ಟರಲ್ಲಿ ಕೆಲವು ಜಾತಿಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಹಿಂದುಳಿಯುವಿಕೆಗೆ ಕಾರಣ ಹುಡುಕಲು ಈಗಾಗಲೇ ಹಲವು ಆಯೋಗ, ಸಮಿತಿಗಳು ರಚನೆಯಾಗಿ ವರದಿ ಸಲ್ಲಿಕೆಯಾಗಿವೆ.

ಧಾರವಾಡ:

ಪರಿಶಿಷ್ಟ ಜಾತಿಗೆ ಒಳಮೀಸಲು ಕಲ್ಪಿಸಲು ರಾಜ್ಯದ ಎಲ್ಲ ತಾಲೂಕುಗಳಿಂದ ಮಾದಿಗರ ದತ್ತಾಂಶ ಸಂಗ್ರಹಿಸಿ ರಾಜ್ಯ ಸರ್ಕಾರ ನೇಮಿಸಿರುವ ನ್ಯಾ. ನಾಗಮೋಹನದಾಸ್ ಆಯೋಗಕ್ಕೆ ಸಲ್ಲಿಸುವಂತೆ ಕೇಂದ್ರದ ಮಾಜಿ ಸಚಿವ ಆನೇಕಲ್ ನಾರಾಯಣಸ್ವಾಮಿ ಮಾದಿಗ ಸಂಘಟನೆಗಳಿಗೆ ಸಲಹೆ ನೀಡಿದರು.

ಶನಿವಾರ ಇಲ್ಲಿಯ ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ಪ್ರಾಯೋಗಿಕ ದತ್ತಾಂಶ ಸಂಗ್ರಹ ಕುರಿತು ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಪರಿಶಿಷ್ಟರಲ್ಲಿ ಕೆಲವು ಜಾತಿಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಹಿಂದುಳಿಯುವಿಕೆಗೆ ಕಾರಣ ಹುಡುಕಲು ಈಗಾಗಲೇ ಹಲವು ಆಯೋಗ, ಸಮಿತಿಗಳು ರಚನೆಯಾಗಿ ವರದಿ ಸಲ್ಲಿಕೆಯಾಗಿವೆ. ಅವುಗಳಲ್ಲಿನ ದತ್ತಾಂಶ ಮತ್ತು ಆಯಾ ತಾಲೂಕು ಮಟ್ಟದಲ್ಲಿ ಲಭ್ಯವಿರುವ ಅಂಕಿ ಅಂಶ ಸಂಗ್ರಹಿಸಿ ಪ್ರತಿ ತಾಲೂಕಿನಿಂದ ಪ್ರತ್ಯೇಕ ಮನವಿಯನ್ನು ಆಯೋಗಕ್ಕೆ ಸಲ್ಲಿಸುವುದು ಅತ್ಯಗತ್ಯವಾಗಿದೆ ಎಂದು ನಾರಾಯಣಸ್ವಾಮಿ ಒತ್ತಿ ಹೇಳಿದರು.ಆಯ್ಕೆಯಾದ ಸರ್ಕಾರಗಳು ಆಯಾ ಕಾಲಕ್ಕೆ ತನ್ನಲ್ಲಿನ ಸಮುದಾಯಗಳ ಅಭಿವೃದ್ಧಿ, ಹಿಂದುಳಿಯುವಿಕೆ ಕುರಿತಂತೆ ಪರಾಮರ್ಶಿಸಿ ಆ ಅಸಮಾನತೆ ನಿವಾರಣೆಗೆ ಮಾಡಬೇಕೆಂದು ಸಂವಿಧಾನ ಹೇಳಿದೆ. ಆದರೆ, ರಾಜ್ಯದಲ್ಲಿ ಅಧಿಕಾರ ನಡೆಸಿದ ಯಾವುದೇ ಸರ್ಕಾರ ಕಣ್ತೆರೆದು ನೋಡದೇ ಇದ್ದಾಗ ಮಾದಿಗ ಸಮುದಾಯ ಅವಕಾಶ ಗಳಿಂದ ವಂಚಿತವಾಗುತ್ತ ಬಂದಿದೆ. ಇದಕ್ಕೆ ಕೊನೆ ಹಾಡಲು ಆಯೋಗದ ಮುಂದೆ ನಮ್ಮ ನೋವಿನ ಸಮರ್ಥನೆ ಮಾಡಿಕೊಳ್ಳಬೇಕಿದೆ ಎಂದರು.

ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಲ್ಲ ಸಮುದಾಯಗಳ ದತ್ತಾಂಶ ಇರುತ್ತದೆ. ಅದನ್ನೇ ಆಧರಿಸಿ ಒಳಮೀಸಲು ನೀಡಬೇಕಿತ್ತು. ಆದಾಗ್ಯೂ ಹೊಸ ಆಯೋಗ ರಚಿಸಿದೆ. ನಮ್ಮ ಬೇಡಿಕೆ ಈಡೇರಿಸುವಾಗ ಮಾತ್ರ ಇಂತಹ ನೆಪಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಮೂರು ದಶಕಗಳ ಹೋರಾಟದ ಫಲವಾಗಿ ಒಳಮೀಸಲಾತಿ ಪಡೆಯುವ ಹಂತಕ್ಕೆ ಬಂದಿದ್ದೇವೆ. ಭಾವನಾತ್ಮಕತೆ ಬಿಟ್ಟು ವಾಸ್ತವ ನೆಲೆಗಟ್ಟಿನಲ್ಲಿ ದತ್ತಾಂಶ ಇದ್ದ ಮನವಿಯನ್ನು ಆಯೋಗಕ್ಕೆ ಸಲ್ಲಿಸೋಣ ಎಂದರು.

ಕವಿವಿ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಪ್ರಕೃತಿಯಲ್ಲಿ ಅಸಮತೋಲನವಾದರೆ ಬಿರುಗಾಳಿ, ಭೂಕಂಪ, ಪ್ರವಾಹ ಹುಟ್ಟಿಕೊಳ್ಳುತ್ತವೆ. ಮಾನವ ಸಮಾಜದಲ್ಲಿ ತಾರತಮ್ಯವಾದರೆ ಕ್ರಾಂತಿ ಹುಟ್ಟಿಕೊಳ್ಳುತ್ತದೆ. ಇಂಥ ಕ್ರಾಂತಿಯನ್ನು ಮಾದಿಗ ಸಮುದಾಯ ಮಾಡಿದೆ. ಅದರ ಫಲ ದಕ್ಕುವ ಸಮಯ ಬಂದಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನದ ಷಡಕ್ಷರಿಮುನಿ ಸ್ವಾಮೀಜಿ, ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸಂಘಟನೆಯ ಮನೋಭಾವ ಬೆಳೆಸಿಕೊಂಡು ಒಳಮೀಸಲು ಸೌಲಭ್ಯ ನಿಮ್ಮದಾಗಿಸಿಕೊಳ್ಳಿ ಎಂದರು.

ಡಾ. ಜಿ.ಬಿ. ನಂದನ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಆರ್‌ಎಸ್ ಅಧಿಕಾರಿ ಎಚ್.ಆರ್. ಭೀಮಾಶಂಕರ, ಪ್ರೊ. ಶಿವಶರಣ ಸಿ‌.ಟಿ., ಪ್ರೊ. ಮಹಾದೇವಪ್ಪ ದಳಪತಿ, ಸಂಚಾಲಕ ಪರಸಪ್ಪ ಮಾಂಗ, ಮಂಜುನಾಥ ಹಾಸಟ್ಟಿ, ತರುಣ ದೊಡಮನಿ, ಅಜೀತ ಮ್ಯಾಗಡಿ, ನಾಗರಾಜ ಮಾದರ, ವಿರುಪಾಕ್ಷಿ ಮಾಚನೂರ ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ