ಕಾರವಾರ-ಹಬ್ಬುವಾಡ ರಸ್ತೆ ಗುಂಡಿ ಮುಚ್ಚಲು ಭಿಕ್ಷೆ ಎತ್ತಿ ದೇಣಿಗೆ ಸಂಗ್ರಹ

KannadaprabhaNewsNetwork |  
Published : Dec 17, 2025, 02:30 AM IST
ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ನಗರದಲ್ಲಿ ಹದಗೆಟ್ಟ ಕಾರವಾರ-ಹಬ್ಬುವಾಡ-ಕೈಗಾ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಆಟೋ ಚಾಲಕರು ಹಾಗೂ ಮಕ್ಕಳ ಪಕ್ಷದ ಸದಸ್ಯರು ಜಂಟಿಯಾಗಿ ಮಂಗಳವಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಆಟೋ ಚಾಲಕರು ಹಾಗೂ ಮಕ್ಕಳ ಪಕ್ಷದ ಸದಸ್ಯರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕಾರವಾರ

ನಗರದಲ್ಲಿ ಹದಗೆಟ್ಟ ಕಾರವಾರ-ಹಬ್ಬುವಾಡ-ಕೈಗಾ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಆಟೋ ಚಾಲಕರು ಹಾಗೂ ಮಕ್ಕಳ ಪಕ್ಷದ ಸದಸ್ಯರು ಜಂಟಿಯಾಗಿ ಮಂಗಳವಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಹಬ್ಬುವಾಡದಿಂದ ಕೈಗಾ ಮಾರ್ಗವಾಗಿ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದು, ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆ ಸಾಮಾಜಿಕ ಹೋರಾಟಗಾರ ರಾಘು ನಾಯ್ಕ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಬ್ಬುವಾಡದಿಂದ ಪಿಡಬ್ಲೂಡಿ ಕಚೇರಿಯವರೆಗೆ ಸುಮಾರು 3 ಕಿಮೀ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ರಸ್ತೆಯುದ್ದಕ್ಕೂ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳಿಂದ ಮಡಿಕೆ ಹಿಡಿದು ಭಿಕ್ಷೆ ಸಂಗ್ರಹಿಸಿದ ಪ್ರತಿಭಟನಾಕಾರರು, ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷವಷ್ಟೇ ರಸ್ತೆಗೆ ತೇಪೆ ಕಾರ್ಯ ಮಾಡಲಾಗಿತ್ತಾದರೂ, ಮಳೆಗಾಲದಲ್ಲಿ ಅದು ಸಂಪೂರ್ಣವಾಗಿ ಕಿತ್ತುಹೋಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ನ. 27 ಅಥವಾ ಡಿ. 1ರೊಳಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ₹20 ಕೋಟಿ ಅನುದಾನ ಮಂಜೂರಾಗಿದ್ದು, ಗುತ್ತಿಗೆ ನೀಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ನಿಗದಿತ ಗಡುವು ಮುಗಿದರೂ ಕಾಮಗಾರಿ ಆರಂಭವಾಗದ ಹಿನ್ನೆಲೆ ಜನರು ರಸ್ತೆಗಿಳಿದು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕೈಗಾ ಯೋಜನೆಯ ನಿರ್ಮಾಣ ಕಾರ್ಯಕ್ಕಾಗಿ 16ರಿಂದ 20 ಚಕ್ರಗಳ ಭಾರೀ ವಾಹನಗಳು ನಿರಂತರವಾಗಿ ಸಂಚರಿಸುವುದರಿಂದ ರಸ್ತೆಗಳು ಹೊಂಡಮಯವಾಗಿವೆ. ಕೈಗಾ ಆಡಳಿತ ಮಂಡಳಿಯ ಬಳಿ ಸಾಕಷ್ಟು ಸಿಎಸ್‌ಆರ್ ಅನುದಾನವಿದ್ದರೂ, ಅವರು ಕಾರವಾರದ ಶಾಲೆ, ಕಾಲೇಜು ಅಥವಾ ರಸ್ತೆ ಅಭಿವೃದ್ಧಿಗೆ ನಯಾಪೈಸೆ ಖರ್ಚು ಮಾಡುತ್ತಿಲ್ಲ ಎಂದು ರಾಘು ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.

ಒಂದೆಡೆ ರಸ್ತೆಗಳು ಹೊಂಡ ಬಿದ್ದು ಜನರ ಪ್ರಾಣಕ್ಕೆ ಕುತ್ತು ತರುತ್ತಿವೆ. ಇಂತಹ ಸಂದರ್ಭದಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕರಾವಳಿ ಉತ್ಸವ ಮಾಡುವುದು ಎಷ್ಟು ಸರಿ? ಮೊದಲು ರಸ್ತೆಗಳನ್ನು ಸರಿಪಡಿಸಿ, ನಂತರ ಉತ್ಸವ ಮಾಡಿ, ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಕ್ಷಣವೇ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಇಲಾಖೆಯ ರಸ್ತೆಗಳು 25 ರಿಂದ 30 ಟನ್ ಭಾರ ತಡೆದುಕೊಳ್ಳುವಂತೆ ವಿನ್ಯಾಸಗೊಂಡಿವೆ. ಆದರೆ ಕೈಗಾ ಯೋಜನೆಗಾಗಿ 80ರಿಂದ 90 ಟನ್ ಭಾರದ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಒಪ್ಪಿಕೊಂಡರು. ಶಾಸಕರ ಪ್ರಯತ್ನದಿಂದ ₹20 ಕೋಟಿ ಅನುದಾನ ಮಂಜೂರಾಗಿದ್ದು, ರಸ್ತೆ ಅವ್ಯವಸ್ಥೆಯ ಶಾಶ್ವತ ಪರಿಹಾರಕ್ಕಾಗಿ ₹105 ಕೋಟಿ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!