ಕನ್ನಡಪ್ರಭ ವಾರ್ತೆ ಹನೂರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಭಕ್ತಾದಿಗಳು ಅರಣ್ಯದಲ್ಲಿ ಬಿಸಾಡಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಪದಾರ್ಥಗಳನ್ನು ಮಲೆ ಮಹದೇಶ್ವರ ಬೆಟ್ಟದ ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಂಗ್ರಹಿಸಿ ಸ್ವಚ್ಛಗೊಳಿಸಿದ್ದಾರೆ.ಮಾದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ, ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ರಾಜ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ಮಂಡ್ಯ, ಕನಕಪುರ, ರಾಮನಗರ, ಚನ್ನಪಟ್ಟಣ, ಮಳವಳ್ಳಿ ತಾಲೂಕಿನಿಂದ ಶ್ರೀ ಕ್ಷೇತ್ರ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಆಗಮಿಸಿದ್ದರು. ಈ ವೇಳೆ ಭಕ್ತಾದಿಗಳು ಪ್ಲಾಸ್ಟಿಕ್ ನೀರಿನ ಬಾಟಲ್‌ಗಳು ತಿಂಡಿ ತಿನಿಸುಗಳ ತ್ಯಾಜ್ಯ ಹಾಗೂ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದರು. ಪ್ರಾಧಿಕಾರದ ವತಿಯಿಂದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿಯೇ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗಿನ ಮುಖ್ಯರಸ್ತೆಯವರೆಗೆ ಸ್ವಚ್ಛಗೊಳಿಸಿದ್ದರು.ಕಳೆದ ಎರಡು ದಿನಗಳಿಂದ ಪಾದಯಾತ್ರೆಯ ಮೂಲಕ ತೆರಳುವ ಅರಣ್ಯದ ಒಳಗಡೆ ಬಿಸಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿದ್ಯಾರ್ಥಿಗಳು, ಚನ್ನಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರೆ ಭಕ್ತಾದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ರಂಗಸ್ವಾಮಿ ದೇವಸ್ಥಾನದಿಂದ ಪೊನ್ನಾಚಿ ಕ್ರಾಸ್ ವರೆಗೆ, ಕೌದಳ್ಳಿ ಆರ್ಚ್ ನಿಂದ ಎಲಚಿಕೆರೆ ಕ್ರಾಸ್ ವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಒಂದು ಟ್ರ್ಯಾಕ್ಟರ್ ನಷ್ಟು ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದ್ದಾರೆ.
ಸ್ವಚ್ಛತೆಯ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಪ್ಲಾಸ್ಟಿಕ್ ಬಳಸದಂತೆ ಎಷ್ಟೇ ಅರಿವು ಮೂಡಿಸಿದರೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿಲ್ಲ, ಪ್ರಜ್ಞಾವಂತರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ವನ್ಯ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ, ಇದಲ್ಲದೆ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಬಸ್, ಇನ್ನಿತರ ವಿವಿಧ ವಾಹನಗಳ ಮೂಲಕ ತೆರಳುವ ಭಕ್ತಾದಿಗಳು ಹಾಗೂ ಪಾದಯಾತ್ರೆಗಳು ಅರಣ್ಯದಲ್ಲಿ ಪ್ಲಾಸ್ಟಿಕ್ ಬಿಸಾಡಬಾರದು ಎಂದು ಮನವಿ ಮಾಡಿದ್ದಾರೆ.ಕೌದಳ್ಳಿ ಆರ್ಚ್‌ನಿಂದ ಮಾದೇಶ್ವರ ಬೆಟ್ಟದ ವರೆಗೆ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿದ್ಯಾರ್ಥಿಗಳು ಹಾಗೂ ಭಕ್ತರ ನೆರವಿನೊಂದಿಗೆ ಸಂಗ್ರಹಿಸಿ ಮರುಬಳಕೆ ಘಟಕಕ್ಕೆ ಕಳುಹಿಸಲಾಗಿದೆ. ಶ್ರೀ ಕ್ಷೇತ್ರ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿರುವುದರಿಂದ ಹಾಗೂ ಪರಿಸರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುವುದರಿಂದ ಭಕ್ತರು, ಸಾರ್ವಜನಿಕರು ಸಹಕರಿಸಬೇಕು.ಡಾ.ಸಂತೋಷ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ,