ಪ್ರವಾಸಿ ಟ್ಯಾಕ್ಸಿಗಳಲ್ಲಿ ನಿಗದಿತ ದರಪಟ್ಟಿ ಪ್ರಕಟಿಸಲು ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Jan 31, 2024, 02:18 AM IST
ಚಿತ್ರ : 30ಎಂಡಿಕೆ2 : ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದವರು.  | Kannada Prabha

ಸಾರಾಂಶ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಮಂಗಳವಾರ ಮಡಿಕೇರಿಯಲ್ಲಿ ನಡೆಯಿತು. ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಒಂದು ದರ ನಿಗದಿ ಮಾಡಿ ದರಪಟ್ಟಿಯ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್, ಹೋಂ ಸ್ಟೇ ಮಾಲೀಕರು ಹಾಗೂ ಟ್ಯಾಕ್ಸಿ ಮಾಲಿಕರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಹೆದ್ದಾರಿ ಫಲಕ ಹಾಗೂ ಸೈನೇಜ್ ಬೋರ್ಡುಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲು ಮುಂದಾಗಲಾಗಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು. ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 4 ಸಾವಿರ ಹೋಂ ಸ್ಟೇಗಳಿದ್ದು, ಸುಮಾರು 1900 ರಷ್ಟು ಹೋಂ ಸ್ಟೇಗಳು ನೋಂದಣಿಯಾಗಿವೆ. ಉಳಿದ ಹೋಂ ಸ್ಟೇಗಳನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.

ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್‌ ಅಧ್ಯಕ್ಷ ಬೆನ್ ಗಣಪತಿ ಮಾತನಾಡಿ, ಹೋಂ ಸ್ಟೇ ಆರಂಭಿಸುವಾಗ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಿಂಬರಹ ಪಡೆಯಬೇಕಿದೆ. ಜೊತೆಗೆ ಪೊಲೀಸ್ ಇಲಾಖೆಯಿಂದ ಮತ್ತು ಸ್ಥಳೀಯ ಸಂಸ್ಥೆಗಳಿಂದ ಎನ್‌ಒಸಿ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಸಕಾಲದಲ್ಲಿ ಪ್ರಕ್ರಿಯೆಗಳು ಆಗಬೇಕು ಎಂದು ಮನವಿ ಮಾಡಿದರು.

ಮಾಂದಲ್‌ಪಟ್ಟಿ ಮತ್ತು ಅಬ್ಬಿಪಾಲ್ಸ್ ಮತ್ತಿತರ ಕಡೆಗಳಲ್ಲಿ ಯೆಲ್ಲೋ ಬೋರ್ಡ್ ಹೊರತುಪಡಿಸಿ ವೈಟ್‌ಬೋರ್ಡ್ ವಾಹನಗಳು ಸಹ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಗ್ಗೆ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಒಂದು ದರ ನಿಗದಿ ಮಾಡಿ ದರಪಟ್ಟಿಯ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ಮಾಡಿದರು.

ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷ ಕುಪ್ಪಂಡ ವಸಂತ ಅವರು ಮಾತನಾಡಿ, ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಹಾಗೂ ಬ್ಯಾಡ್ಜ್ ಹೊಂದಿರಬೇಕು. ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ದರ ನಿಗದಿಪಡಿಸಿ ದರಪಟ್ಟಿಯ ನಾಮಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.

ಹೋಂ ಸ್ಟೇ ಅಸೋಷಿಯೇಷನ್‌ನ ಮೋಂತಿ ಗಣೇಶ್ ಮಾತನಾಡಿ, ಮಾಂದಲ್‌ಪಟ್ಟಿಯಲ್ಲಿ ಅರಣ್ಯ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಪ್ರವಾಸಿ ತಾಣಗಳಾದ ರಾಜಾಸೀಟು ಮತ್ತು ಚೇಲಾವರ ಜಲಪಾತ ಹಾಗೂ ದುಬಾರೆ ಆನೆಶಿಬಿರ ಮತ್ತು ನಿಸರ್ಗಧಾಮ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಹಾಗೂ ಯೋಜನಾ ವರದಿ ತಯಾರಿಸಲು ಮುಂದಾಗಲಾಗಿದೆ. ಹಾಗೆಯೇ ಕುಂಬೂರು ಗ್ರಾಮದ ಬಳಿ ಇರುವ ಮಕ್ಕಳ ಗುಡಿಬೆಟ್ಟ ಅಭಿವೃದ್ಧಿ ಪಡಿಸಲು ಯೋಜನಾ ವರದಿ ತಯಾರಿಸಲಾಗಿದೆ ಎಂದು ಅನಿತಾ ಭಾಸ್ಕರ್ ಸಭೆಯ ಗಮನಕ್ಕೆ ತಂದರು. ಕೊಡಗು ಹೋಂ ಸ್ಟೇಗಳ ದರ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಮತ್ತಿತರ ಮಾಹಿತಿ ಒಳಗೊಂಡ ವೆಬ್‌ಸೈಟ್ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದ್ದು, ಅನುಮತಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಕೋರಿದರು. ಕೊಡವ ಹೆರಿಟೇಜ್‌ ಕೇಂದ್ರ: ಕೊಡವ ಹೆರಿಟೇಜ್ ಕೇಂದ್ರ ಸಂಬಂಧಿಸಿದಂತೆ 3.30 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇನ್ನೂ ಹೊರಾಂಗಣ ಅಭಿವೃದ್ಧಿ ಆಗಬೇಕಿದೆ. ಆ ನಿಟ್ಟಿನಲ್ಲಿ ಕೊಡವ ಹೆರಿಟೇಜ್ ಹಸ್ತಾಂತರ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ನಾಗೇಂದ್ರ ಪ್ರಸಾದ್‌ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ಸ್ಥಳಗಳನ್ನು ಪ್ರತ್ಯೇಕವಾಗಿ ಗುರುತಿಸಿ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವಂತಾಗಬೇಕು ಎಂದರು.

ಕೂರ್ಗ್ ಹೋಂ ಸ್ಟೇ ಅಸೋಷಿಯೇಷನ್‌ನ ಕೆ.ಎಂ.ಕರುಂಬಯ್ಯ, ಹೋಟೆಲ್ ಅಸೋಷಿಯೇಷನ್‌ ಉಪಾಧ್ಯಕ್ಷ ಜಾಹೀರ್ ಅಹಮದ್, ಕಾರ್ಯದರ್ಶಿ ನಾಸೀರ್ ಅಹಮ್ಮದ್, ಖಜಾಂಚಿ ಅತಿಥಿ ಭಾಸ್ಕರ್, ಸೋಮವಾರಪೇಟೆ ತಾಲೂಕು ಹೋಂ ಸ್ಟೇ ಅಧ್ಯಕ್ಷ ರೋಹಿತ್ ಹಲವು ವಿಚಾರ ಕುರಿತು ಪ್ರಸ್ತಾಪಿಸಿ ಗಮನ ಸೆಳೆದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ನೇತ್ರಾವತಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ