ಮುಳ್ಳಯ್ಯನಗಿರಿ ಸಂಚಾರ ನಿಷೇಧ । ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ, ಕೆರೆ, ನದಿಗಳು ತುಂಬಿ ಅಪಾಯಕಾರಿ ಮಟ್ಟ ತಲುಪಿವೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಭೂ ಕುಸಿತದಿಂದ ಸಾರ್ವಜನಿಕರು, ಪ್ರವಾಸಿಗರು ಮುಂದಿನ ಒಂದು ವಾರ ಅಥವಾ ಮಳೆ ಕಡಿಮೆ ಯಾಗುವವರೆಗೆ ಮುಂಜಾಗ್ರತಾ ಕ್ರಮ ಪಾಲಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯುವಂತಿಲ್ಲ. ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತದ ಸಂಭವವಿರುವುದರಿಂದ ಚಾರಣಿಗರ ಟ್ರಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಅನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ವಿವಿಧ ಸ್ಥಳಗಳಿಂದ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲಾ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ತಿಳಿಸಿದ್ದಾರೆ.ಮುಳ್ಳಯ್ಯನಗಿರಿ ಸಂಚಾರ ನಿಷೇಧ: ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಈ ರಸ್ತೆಯ ಮೇಲೆ ಅಲ್ಲಲ್ಲಿ ಗುಡ್ಡ ಕುಸಿದಿದೆ. ಅತೀಯಾದ ಮಳೆಗೆ ರಸ್ತೆಯ ಮೇಲ್ಮೈಗೆ ತೀವ್ರ ಹಾನಿಯಾಗಿದ್ದು, ವಾಹನಗಳ ಸಂಚಾರ ಅಪಾಯಕಾರಿ ಎಂದು ಸೀತಾಳಯ್ಯನಗರಿ ಹಾಗೂ ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯಲ್ಲಿ (ಅತೀ ಅವಶ್ಯಕ ವಾಹನಗಳನ್ನು ಹೊರತು ಪಡಿಸಿ) ಮಳೆ ತೀವ್ರತೆ ಕಡಿಮೆಯಾಗುವವರೆಗೆ ಅಂದರೆ ಜುಲೈ 31ರವರೆಗೆ ವಿಸ್ತರಿಸಿ ವಾಹನ ಸಂಚಾರವನ್ನು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭ: ಜುಲೈ ಮಾಹೆಯ ಹೆಚ್ಚಿನ ಪ್ರಮಾಣದ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿ ನಿರಾಶ್ರಿತವಾದ ಕುಟುಂಬಗಳಿಗೆ ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಮಳಲೂರು ಗ್ರಾಮ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ವಸತಿ ನಿಲಯ ತೇಗೂರು, ಇಲ್ಲಿ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಳೆ ಸಂತ್ರಸ್ಥರಿಗೆ ಜುಲೈ 26 ರಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ಡಾ. ಸುಮಂತ್ ತಿಳಿಸಿದ್ದಾರೆ.ಪೋಟೋ ಫೈಲ್ ನೇಮ್ 27 ಕೆಸಿಕೆಎಂ 5