ವೈರಮುಡಿ ಉತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಶ್ರಮದಾನ

KannadaprabhaNewsNetwork | Published : Apr 16, 2025 12:35 AM

ಸಾರಾಂಶ

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆಹ್ವಾನದ ಮೇರೆಗೆ ಶಿಬಿರಾಧಿಕಾರಿ ಪ್ರೊ.ವೆಂಕಟೇಗೌಡ ಮಾರ್ಗದರ್ಶನದಲ್ಲಿ ಏ.6ರಿಂದ 12ರ ವರೆಗೆ ವಾರ್ಷಿಕ ವಿಶೇಷ ಶಿಬಿರವನ್ನು ಮೇಲುಕೋಟೆಯಲ್ಲಿ ಹಮ್ಮಿಕೊಂಡು ಏ.7ರ ವೈರಮುಡಿ ಉತ್ಸವದಂದು 12 ಗಂಟೆಗಳ ಕಾಲ ನಿರಂತರವಾಗಿ ಸಹಸ್ರಾರು ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾನ ನಿರ್ವಹಣೆ ಮಾಡಿ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವೈರಮುಡಿ ಬ್ರಹ್ಮೋತ್ಸವದ ವೇಳೆ ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಛತೆ ಆದ್ಯತೆ ನೀಡಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆಹ್ವಾನದ ಮೇರೆಗೆ ಶಿಬಿರಾಧಿಕಾರಿ ಪ್ರೊ.ವೆಂಕಟೇಗೌಡ ಮಾರ್ಗದರ್ಶನದಲ್ಲಿ ಏ.6ರಿಂದ 12ರ ವರೆಗೆ ವಾರ್ಷಿಕ ವಿಶೇಷ ಶಿಬಿರವನ್ನು ಮೇಲುಕೋಟೆಯಲ್ಲಿ ಹಮ್ಮಿಕೊಂಡು ಏ.7ರ ವೈರಮುಡಿ ಉತ್ಸವದಂದು 12 ಗಂಟೆಗಳ ಕಾಲ ನಿರಂತರವಾಗಿ ಸಹಸ್ರಾರು ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾನ ನಿರ್ವಹಣೆ ಮಾಡಿ ಗಮನ ಸೆಳೆದರು.

ಜೊತೆಗೆ ರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಬ್ರಹ್ಮೋತ್ಸವದ ನಡೆದ ಏ.12ರವರೆಗೆ ಪ್ರತಿದಿನ ಅನ್ನದಾನ ಸುಸಜ್ಜಿತವಾಗಿ ನಡೆಸಿದರು. ಕೊನೇ ದಿನ ಭಕ್ತರು ಬಳಸಿ ಬಿಸಾಡಿದ್ದ ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯಗಳು, ಬಟ್ಟೆಗಳು, ತಿಂದು ಉಳಿಸಿದ ಆಹಾರಗಳ ರಾಶಿ, ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಮುಜಗರವಿಲ್ಲದೆ ಸ್ವಚ್ಛಮಾಡಿದರು.

ಕಲ್ಯಾಣಿಯ ಸಾಲು ಮಂಟಪದ ಹಿಂಭಾಗ ನಿರ್ಮಿಸಿದ್ದ ತುಳಸಿ ತೋಟದಲ್ಲಿ ಹೇರಳವಾಗಿ ಬೆಳೆದಿದ್ದ ಕಳೆಯ ಗಿಡಗಳನ್ನು ಕಿತ್ತು ಪಾತಿ ಮಾಡಿ ತೋಟಕ್ಕೆ ಕಳೆತಂದುಕೊಟ್ಟರು.

ವೈರಮುಡಿಯ ತೀರ್ಥಸ್ನಾನ ಮಹೋತ್ಸವದಂದು ಕಲ್ಯಾಣಿಯ ಸುತ್ತ ಸ್ವಚ್ಛತಾ ಕಾರ್ಯ ಮಾಡುವ ಜೊತೆಗೆ ಪೊಲೀಸರ ಅನುಪಸ್ಥಿತಿಯಲ್ಲಿ ಬೆಳಗ್ಗೆ 5 ರಿಂದ 2.30ರವರೆಗೆ ಕಲ್ಯಾಣಿಯ ನೀರನ್ನು ಯಾರೂ ಸ್ಪರ್ಷಿಸದಂತೆ ಕಟ್ಟೆಚ್ಚರವಹಿಸಿ ಸಂಪ್ರದಾಯ ಕಾಪಾಡುವ ಜೊತೆಗೆ ಐವತ್ತು ಸಾವಿರದಷ್ಟು ಭಕ್ತರು ನೆರದಿದ್ದರೂ ತೀರ್ಥಸ್ನಾನದಲ್ಲಿ ಯಾವುದೇ ನೂಕುನುಗ್ಗಲಾಗದಂತೆ ನೋಡಿಕೊಂಡರು.

ರಥೋತ್ಸವದಂದು ದೇವಾಲಯದಲ್ಲಿ ದರ್ಶನಕ್ಕೆ ಸಾಗುವ ಭಕ್ತರ ಸರತಿಸಾಲನ್ನೂ ನಿರ್ವಹಿಸಿದರು. ಶಿಬಿರಾರ್ಥಿಗಳಿಗೆ ಅನ್ನದಾನ ಭವನದಲ್ಲೇ ವಾಸ್ತವ್ಯ ಮತ್ತು ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಸಹ ಶಿಬಿರಾಧಿಕಾರಿಗಳಾಗಿ ಉಪನ್ಯಾಸಕ ರಾಜೇಶ್, ಮಹದೇವಯ್ಯ, ಎಚ್.ಎನ್ ಸುರೇಶ್ ಭಾಗವಹಿಸಿದ್ದರು.

ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳು ವೈರಮುಡಿ ಬ್ರಹ್ಮೋತ್ಸವದಲ್ಲಿ ಮಾಡಿದ ಸಾರ್ಥಕ ಶ್ರಮದಾನ ಸೇವೆಯನ್ನು ಪ್ರಶಂಸಿರುವ ದೇವಾಲಯದ ಇಒ ಶೀಲಾ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್‌ಗುರೂಜಿ ವಿದ್ಯಾರ್ಥಿಗಳಿಗೆ ಚೆಲುವನಾರಾಯಣಸ್ವಾಮಿ ಕೃಪೆಯಿಂದ ಉಜ್ವಲಭವಿಷ್ಯ ಲಭ್ಯವಾಗಲಿ ಎಂದು ಹಾರೈಸಿದರು.

Share this article