ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಳ್ಳಿ ಸಂಸ್ಕೃತಿಯನ್ನು ಮಕ್ಕಳಿಗೆ ತಲುಪಿಸುವುದರಲ್ಲಿ ನಾವು ಸೋತಿದ್ದೇವೆ. ಹಟ್ಟಿ ಹೈಕಳ ಜಗುಲಿ ಶಿಬಿರದ ಮೂಲಕ ಹಳ್ಳಿಯ ಅನುಭವ ಮಕ್ಕಳಿಗೆ ಸಿಗಲಿ ಎಂದು ರಾಜ್ಯ ದಲಿತ ಮಹಾಸಭಾ ಉಪಾಧ್ಯಕ್ಷ, ಹೋರಾಟಗಾರ ವೆಂಕಟರಮಣಸ್ವಾಮಿ(ಪಾಪು) ತಿಳಿಸಿದರು.ನಗರದ ಭುವನೇಶ್ವರಿ ವೃತ್ತದಲ್ಲಿರುವ ಸಂತ ಜೋಸೆಫ್‌ರ್ ಮಹಿಳಾ ಅಭಿವೃದ್ಧಿ ಕೇಂದ್ರದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರವನ್ನು ಅವರು ಮಾತನಾಡಿದರು. ಬೇಸಿಗೆ ಬಂದರೆ ಮಕ್ಕಳು ಮೊದಲೆಲ್ಲ ಅಜ್ಜಿ ಊರಿಗೆ ಹೋಗುತ್ತಿದ್ದರು. ಈಗ ಅಜ್ಜಿ ಮನೆಯ ಬಾಂಧವ್ಯ ಕಡಮೆಯಾಗುತ್ತಿದೆ. ಇದು ಆತಂಕ ಉಂಟುಮಾಡಿದೆ ಎಂದರು.
ಕಾರ್ಯಕ್ರಮದ ಅತಿಥಿಯಯಾಗಿ ಭಾಗವಹಿಸಿದ್ದ ನಗರಸಭಾ ಸದಸ್ಯ ಮಹೇಶ್ ಎಂ.ಮಾತನಾಡಿ, ಮಕ್ಕಳು ಓದಿನ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು. ಮೊಬೈಲ್ ನಿಂದ ಮಕ್ಕಳನ್ನು ದೂರವಿಡಲು ಮಕ್ಕಳಿಗಾಗಿ ನಾಟಕ ಶಿಬಿರಗಳು ಅವಶ್ಯಕ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಶಾಲಾ ವ್ಯವಸ್ಥೆಯಲ್ಲಿ ಮಕ್ಕಳನ್ನು ಅಂಕಗಳಿಗಾಗಿ ತಯಾರು ಮಾಡಲಾಗುತ್ತಿದೆ. ಮಕ್ಕಳ ಆಸಕ್ತಿಗನುಗುಣವಾಗಿ ಪಠ್ಯಕ್ರಮವಾಗಬೇಕು. ನಾಟಕ, ಸಂಗೀತ, ಚಿತ್ರಕಲೆ, ಮಣ್ಣಿನ ಮಾದರಿಯಂತಹ ಚಟುವಟಿಕೆಗಳು ಮಕ್ಕಳು ಹೆಚ್ಚು ಲವಲವಿಕೆಯಿಂದಿರಲು ಹಾಗೂ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಾತನಾಡಿದರು.ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಹಾಗೂ ಶಿಬಿರ ನಿರ್ದೇಶಕ ಕಿರಣ್ ಗಿರ್ಗಿ ಮಾತನಾಡಿ, ಶಿಬಿರವು ಮೇ ೧೫ರ ವರೆಗೆ ನಡೆಯಲಿದ್ದು, ನಾಟಕ ಮತ್ತು ಸಂಗೀತವನ್ನು ಪ್ರಧಾನವಾಗಿರಿಸಿಟ್ಟುಕೊಂಡು ಅದರ ಜೊತೆಗೆ ಚಿತ್ರಕಲೆ, ಕರಕುಶಲತೆ, ಪ್ರವಾಸ, ಮಕ್ಕಳ ಸಂತೆ, ಯೋಗ ಮುಂತಾದ ಚಟುವಟಿಕೆಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ. ಕೊನೆಯ ದಿವಸ ಮಕ್ಕಳಿಂದ ನಾಟಕ ಪ್ರದರ್ಶನವನ್ನು ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಆರ್. ಸತೀಶ್ ಕುಮಾರ್, ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಎಸ್.ಜಿ. ಮಹಾಲಿಂಗ ಗಿರ್ಗಿ, ಶಿಬಿರದ ಸಂಚಾಲಕಿ ನಂದಿನಿ ರವಿಕುಮಾರ್, ಕಲಾವಿದೆ ಜ್ಯೋತಿ, ಕೊಂಬು ಕಹಳೆ ಕಲಾವಿದ ರವಿಚಂದ್ರ ಪ್ರಸಾದ್ ಹಾಗೂ ಶಿಬಿರದ ಮಕ್ಕಳು, ಪೋಷಕರು ಹಾಜರಿದ್ದರು.