ಕನ್ನಡಪ್ರಭ ವಾರ್ತೆ ಬೆಂಗಳೂರು
ತಂದೆ ಬುದ್ಧಿ ಮಾತು ಹೇಳಿದ್ದಕ್ಕೆ ಬೇಸರಗೊಂಡು ಕಾಲೇಜಿನ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ದ್ವಿತೀಯ ಪಿಯುವಲ್ಲಿ ಓದುತ್ತಿದ್ದ ಈಜುಪಟು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದಲ್ಲಿ ನಡೆದಿದೆ.ಪುಲಿಕೇಶಿನಗರ ನಿವಾಸಿ ಆರ್ಯನ್ ಮೊಸೆಸ್ ವ್ಯಾಸ್ (17) ಮೃತ. ಕಾಲೇಜಿನಲ್ಲಿ ಬೆಳಗ್ಗೆ ವಿದ್ಯಾರ್ಥಿಗಳನ್ನು ಪ್ರಾರ್ಥನೆಗೆ ಕರೆಯುವ ವೇಳೆ ಆರ್ಯನ್ 2ನೇ ಮಹಡಿಯಿಂದ ಜಿಗಿದಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ಕಾಲೇಜಿನ ಸಿಬ್ಬಂದಿ ಕರೆದೊಯ್ದಿದ್ದಾರೆ. ಆದರೆ ಅಷ್ಟರೊಳಗೆ ತೀವ್ರ ರಕ್ತಸ್ರಾವದಿಂದ ಆರ್ಯನ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪ್ರತಿಭಾವಂತ ಈಜುಪಟು:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿ ಮೊಸೆಸ್ ಕೇಚನ್.ಎಚ್.ವ್ಯಾಸ್ ಅವರ ಪುತ್ರ ಆರ್ಯನ್ ಪುಲಿಕೇಶಿನಗರ ಸಮೀಪದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ. ಪ್ರತಿಭಾವಂತ ಈಜುಪಟು ಆಗಿದ್ದ. ಎಳೆ ವಯಸ್ಸಿನಲ್ಲಿ ಈಜಿನ ಬಗ್ಗೆ ಆಸಕ್ತಿ ಹೊಂದಿದ್ದ ಆರ್ಯನ್, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದ. ಮಗನಿಗೆ ಈಜು ಕಲಿಕೆಗೆ ವ್ಯಾಸ್ ಪ್ರೋತ್ಸಾಹ ನೀಡುತ್ತಿದ್ದರು. ಇತ್ತೀಚಿಗೆ ಈಜು ಕಲಿಕೆಗೆ ಮಗ ನಿರಾಸಕ್ತಿ ಹೊಂದಿದ್ದಾನೆಂದು ತಿಳಿದು ಆರ್ಯನ್‌ಗೆ ಅವರು ಬುದ್ಧಿ ಮಾತು ಹೇಳಿದ್ದರು. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಾಲೇಜಿಗೆ ಇಂದು ರಜೆ ಘೋಷಣೆವಿದ್ಯಾರ್ಥಿ ಆರ್ಯನ್ ಸಾವಿಗೆ ಕ್ಲಾರೆನ್ ಶಾಲಾ ಆಡಳಿತ ಮಂಡಳಿ ಕಂಬನಿ ಮಿಡಿದಿದೆ. ‘ಆರ್ಯನ್ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದು, ಓದಿನಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲಿ ಸಹ ಆತ ಮುಂಚೂಣೆಯಲ್ಲಿದ್ದ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಿಗೆ ಶಾಲೆಯನ್ನು ಪ್ರತಿನಿಧಿಸಿ ಹೆಮ್ಮೆ ತಂದಿದ್ದ ಎಂದು ಶಾಲಾ ಆಡಳಿತ ಮಂಡಳಿ ಸ್ಮರಿಸಿದೆ. ಅಲ್ಲದೆ ಆರ್ಯನ್ ಗೌರವಾರ್ಥ ಮಂಗಳವಾರ ಶಾಲೆಗೆ ರಜೆ ಸಹ ಘೋಷಿಸಿದೆ.
ಎಂದಿನಂತೆ ಸೋಮವಾರ ಕಾಲೇಜಿಗೆ ಬೆಳಗ್ಗೆ ಆರ್ಯನ್ ಬಂದಿದ್ದಾನೆ. ಆಗ ಎರಡನೇ ಮಹಡಿಗೆ ತೆರಳಿ ಕಟ್ಟಡದಿಂದ ಜಿಗಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.