ಕನ್ನಡಪ್ರಭ ವಾರ್ತೆ ವಿಜಯಪುರ
ನಾಡಿನೆಲ್ಲೆಡೆ ಶನಿವಾರ ಸಂಜೆಯಿಂದ ತಡರಾತ್ರಿವರೆಗೂ ವಿಜಯದಶಮಿಯ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ನಗರದಾದ್ಯಂತ ಬಡಾವಣೆಗಳಲ್ಲಿ ಭಕ್ತರು ತಾಯಿ ಚಾಮುಂಡಿಗೆ ಸಂಜೆಯ ಪೂಜೆಯನ್ನು ನೆರವೇರಿಸಿದರು. ನಗರದ ಪ್ರಮುಖ ಬಡಾವಣೆಗಳ ರಸ್ತೆಗಳ ಮುಂದೆ ಪ್ರತಿಷ್ಠಾಪಿಸಲಾಗಿದ್ದ ದೇವಿಗಳ ಮೂರ್ತಿಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಒಂಭತ್ತು ದಿನಗಳ ಕಾಲ ನವರಾತ್ರಿಯ ಉಪವಾಸ ಆಚರಿಸಿದ ತಾಯಂದಿರು ಶನಿವಾರ ರಾತ್ರಿ ದೇವಿಗೆ ಕೊನೆಯ ಪೂಜೆ ಸಲ್ಲಿಸಿ ಉಪವಾಸ ಬಿಟ್ಟು ಅಹಾರವನ್ನು ಸೇವಿಸಿದರು.ಸಂಜೆ ವೇಳೆಗೆ ಹತ್ತಿರದ ಬನ್ನಿ ಮರಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ಬನ್ನಿ ಮುಡಿಯುವ ಪದ್ಧತಿಯನ್ನು ಆಚರಿಸಲಾಯಿತು. ಬಳಿಕ, ಓಣಿಯ ಪ್ರಮುಖರೆಲ್ಲ ಸೇರಿ ಬನ್ನಿಯನ್ನು ತಂದು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮನೆಯ ಹಿರಿಯರಿಗೆ, ಗಲ್ಲಿಯಲ್ಲಿನ ಹಿರಿಯರಿಗೆ ಬನ್ನಿ ನೀಡಿ ಗೌರವಿಸಲಾಯಿತು. ಯುವಕರು ಹಾಗೂ ಯುವತಿಯರೆಲ್ಲ ಸೇರಿ ಮನೆ ಮನೆಗಳಿಗೆ ತೆರಳಿ ತಮ್ಮ ಬಾಂಧವರು ಹಿತೈಷಿಗಳು, ಆಪ್ತರಿಗೆ ಬನ್ನಿ ನೀಡಿ ಹಿರಿಯರ ಆಶೀರ್ವಾದ ಪಡೆದರು.ಹೀಗಾಗಿ, ಬನ್ನಿ ತಗೊಂಡು ಬಂಗಾರದಂಗ ಇರೋಣ ಎಂಬ ಸಂದೇಶ ಹೇಳುವ ಮೂಲಕ ಶುಭಾಷಯ ಕೋರಿದರು. ಇದೇ ವೇಳೆ ಹಿರಿಯರಿಗೆಲ್ಲ ಕಿರಿಯರು ಬನ್ನಿ ನೀಡಿ ಹೆತ್ತವರ ಹಾಗೂ ಹಿರಿಯರ ನಮಸ್ಕರಿಸಿ ಆಶೀರ್ವಾದ ಪಡೆದರು.ನಗರದ ಐಶ್ವರ್ಯ ನಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ಮುಂಭಾಗದಲ್ಲಿ ವಿಧಿ ವಿಧಾನದೊಂದಿಗೆ ಬನ್ನಿ ಗಿಡಕ್ಕೆ ಬನ್ನಿ ಮುಡಿಯುವ ಸಂಪ್ರದಾಯಿಕ ಪೂಜೆ ನಡೆಸಲಾಯಿತು. ಈ ವೇಳೆ ತಾಯಿ ಚಾಮುಂಡೇಶ್ವರಿ ಸಕಲ ಸದ್ಭಕ್ತರಿಗೂ ಆರೋಗ್ಯ, ಯಶ್ವರ್ಯ, ಆಯಸ್ಸು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಎಸ್.ಬಿರಾದಾರ, ರಾಜುಗೌಡ ಪಾಟೀಲ, ಸದಾಶಿವ ಚಿಕರೆಡ್ಡಿ, ಎಸ್.ಎಸ್.ತೊದಲಬಾಗಿ, ಐ.ಎಸ್.ಹುಲಸೂರ, ರಾಜಕುಮಾರ ಜಕ್ಕುಂಡಿ, ಬಸವರಾಜ ಕೋರಿ, ಜಯಪ್ರಕಾಶ ಅಂಬಲಿ, ಉಮೇಶ ಕೋಳಕೂರ, ಜಿ.ಬಿ.ಸಾಲಕ್ಕಿ, ಎಸ್.ಎ.ಪಾಟೀಲ, ಬಿ.ವೈ.ಈಳಗೇರ, ವೀರಣ್ಣ ಹುಂಡೆಕಾರ, ಎಸ್.ಎಸ್.ಜೋಗುರ, ಅಶೋಕ ದೇಶಟ್ಟಿ, ಉಮೇಶ ನರಗುಂದ, ಐ.ಟಿ.ಹಿರೇಮಠ, ಸಂತೋಷ ನಿಂಬಾಳ ಹಾಗೂ ನಗರದ ಸುತ್ತಲಿನ ಬಡಾವಣೆ ಭಕ್ತಾದಿಗಳು ಹಿರಿಯರು ಪ್ರಥಮ ದರ್ಜೆ ಗುತ್ತಿಗೆದಾರರು. ಉದ್ಯಮಿಗಳು, ತಾಯಂದಿರು ಯುವಕರು ಭಾಗವಹಿಸಿದ್ದರು.