ರೈತರ ಭೂಮಿ ಸ್ವಾಧೀನಕ್ಕೆ ನ್ಯಾಯಮೂರ್ತಿ ಗೋಪಾಲಗೌಡ ಕಿಡಿ

KannadaprabhaNewsNetwork |  
Published : Oct 14, 2024, 01:26 AM IST
ಜಸ್ಟೀಸ್‌ ಹೊಂಬೇಗೌಡ ಸೇವಾ ಸಮಿತಿಯಿಂದ ವಿ.ವಿ.ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ, ಚಂದ್ರಶೇಖರಯ್ಯ, ಎಚ್‌.ಎನ್‌.ನಾಗಮೋಹನ್‌ದಾಸ್‌, ಹುಲವಾಡಿ ಜಿ.ರಮೇಶ್‌ ಅವರಿಗೆ ಜಸ್ಟೀಸ್‌ ಹೊಂಬೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಿವೃತ್ತ ವಿಜ್ಞಾನಿ ಶರಶ್ಚಂದ್ರ ಹೊಂಬೇಗೌಡ ಮತ್ತಿತರರಿದ್ದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ತೀವ್ರ ಹೋರಾಟ ನಡೆಯಬೇಕಿದ್ದು, ಸರ್ಕಾರಕ್ಕೆ ಫುಲ್‌ಸ್ಟಾಪ್‌ ಇಡಬೇಕಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ತೀವ್ರ ಹೋರಾಟ ನಡೆಯಬೇಕಿದ್ದು, ಸರ್ಕಾರಕ್ಕೆ ಫುಲ್‌ಸ್ಟಾಪ್‌ ಇಡಬೇಕಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಜಸ್ಟೀಸ್‌ ಹೊಂಬೇಗೌಡ ಸೇವಾ ಸಮಿತಿಯಿಂದ ವಿಶ್ವೇಶ್ವರಪುರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ‘ಜಸ್ಟೀಸ್‌ ಹೊಂಬೇಗೌಡ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಜಂಗಮಕೋಟೆ, ಚಿಂತಾಮಣಿ, ಶಿಡ್ಲಘಟ್ಟ, ಬೆಂಗಳೂರು ಸುತ್ತಮುತ್ತ ಸೇರಿದಂತೆ ಹಲವೆಡೆ ಕೈಗಾರಿಕೆಗಳನ್ನು ಸ್ಥಾಪಿಸಲು ರೈತರ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದರೆ ಈ ಸರ್ಕಾರಕ್ಕೆ ಕೈಗಾರಿಕಾ ನೀತಿಯೇ ಇಲ್ಲ. ಇಷ್ಟು ಸಾಲದು ಎಂಬಂತೆ ಇದೀಗ ನೆಲಮಂಗಲದಲ್ಲಿ 2ನೇ ವಿಮಾನ ನಿಲ್ದಾಣ ಸ್ಥಾಪನೆ, ಟೌನ್‌ಶಿಪ್‌ ಎಂದೆಲ್ಲಾ ರೈತರ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗಾರಿಕಾ ಪ್ರದೇಶ ಸ್ಥಾಪನೆಯಾಗುವ ಸ್ಥಳಗಳಲ್ಲಿನ ರೈತರ ಭೂಮಿಯನ್ನು ರಾಜಕಾರಣಿಗಳು, ದಲ್ಲಾಳಿಗಳು ಬೆದರಿಸಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಕೈಗಾರಿಕೋದ್ಯಮಿಗಳಿಗಾಗಿ ಪೆರಿಫೆರಲ್‌ ರಸ್ತೆ ನಿರ್ಮಾಣ ಮಾಡುತ್ತಾರೆ. ಆದರೆ ರೈತರಿಗೆ 10-15 ವರ್ಷವಾದರೂ ಪರಿಹಾರ ನೀಡಿಲ್ಲ. ನೀತಿಗೆಟ್ಟ ಸರ್ಕಾರಗಳು ರೈತರನ್ನು ತಿಂದು ಹಾಕುತ್ತಿವೆ. ಈ ಸರ್ಕಾರಕ್ಕೆ ಫುಲ್‌ಸ್ಟಾಪ್‌ ಇಡಬೇಕು ಎಂದು ವಾಗ್ದಾಳಿ ನಡೆಸಿದರು.

ಸ್ವಾಮೀಜಿ ಹೇಳಿಕೆ ನೀಡಬೇಕು: ರೈತ ಸಮುದಾಯದ ಬಗ್ಗೆ ಸರ್ಕಾರ ಅನ್ಯಾಯವಾಗಿ ನಡೆದುಕೊಳ್ಳುತ್ತಿದ್ದು ರೈತರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಕೈಗಾರಿಕೆ ಸ್ಥಾಪನೆಗೆ ಜಮೀನು ಪಡೆಯುವ ಕೈಗಾರಿಕೋದ್ಯಮಿಗಳು 10 ವರ್ಷದ ಬಳಿಕ ರಿಯಲ್‌ ಎಸ್ಟೇಟ್‌ ವ್ಯಾಪಾರ ನಡೆಸುತ್ತಾರೆ. ನಿರ್ಮಲಾನಂದನಾಥ ಸ್ವಾಮೀಜಿಯವರು ರೈತರ ಕೈಹಿಡಿಯಬೇಕು. ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಹೇಳಿಕೆ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿ ನಗರಕ್ಕೆ ಮಾತ್ರ ಸೀಮಿತವಾಗಿದ್ದರೂ ಅಧಿಕಾರ ವ್ಯಾಪ್ತಿ ಬಹಳ ಹೆಚ್ಚಾಗಿದೆ. ಸಂವಿಧಾನ ವಿರೋಧಿ, ಶಾಸನ ವಿರೋಧಿಯಾಗಿ ಬಿಡಿಎ ನಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರವು 2014 ರಿಂದ ಜಾರಿಗೊಳಿಸಿರುವ ಭೂ ಸ್ವಾಧೀನ ಕಾಯ್ದೆ ಕ್ರಾಂತಿಕಾರವಾಗಿದೆ. ಆದರೆ ಈ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.

ದಿಟ್ಟ ಹೋರಾಟ ನಡೆಯಬೇಕು: ಸಚಿವರು, ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಬೆಂಗಳೂರು ಸುತ್ತಮುತ್ತ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ. ಆದರೆ ನಮಗೆ ತಿನ್ನಲು ಆಹಾರ ನೀಡುವ ರೈತರ ಪರಿಸ್ಥಿತಿ ಇಂದು ಸಂಕಷ್ಟದಲ್ಲಿದೆ. ಸರ್ಕಾರದ ರೈತ, ಜನ ವಿರೋಧಿ ನಿಲುವುಗಳ ವಿರುದ್ಧ ದಿಟ್ಟ ಹೋರಾಟ ನಡೆಯಬೇಕು. ಸರ್ಕಾರದ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡುವ ದೊಡ್ಡ ಹೋರಾಟ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ, ಚಂದ್ರಶೇಖರಯ್ಯ, ಎಚ್‌.ಎನ್‌. ನಾಗಮೋಹನ್‌ದಾಸ್‌, ಹುಲವಾಡಿ ಜಿ.ರಮೇಶ್‌ ಅವರಿಗೆ ಜಸ್ಟೀಸ್‌ ಹೊಂಬೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಿವೃತ್ತ ವಿಜ್ಞಾನಿ ಶರಶ್ಚಂದ್ರ ಹೊಂಬೇಗೌಡ, ಅಧಿಕಾರಿ ಜಯರಾಮ್‌ ರಾಯಪುರ, ಸಮಿತಿಯ ಗೌರವಾಧ್ಯಕ್ಷ ಎಂ.ಎ.ಆನಂದ್‌, ಕಾರ್ಯಾಧ್ಯಕ್ಷ ಜೆ. ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ