ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಕ್ಕೆ ವಲಸೆ ಬಂದಿರುವ ಎಲ್ಲ ಕುಟುಂಬದ ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಆ ಮೂಲಕ ವಲಸೆ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಮನವಿ ಮಾಡಿದರು.ನಗರದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಆಯೋಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಅಧಿಕಾರಿಗಳು ಮತ್ತು ಪಿಡಿಒಗಳಿಗೆ ವಲಸೆ ಮಕ್ಕಳ ರಕ್ಷಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದಾವಣೆಗೆರೆ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಕೊಪ್ಪಳದಿಂದ ಕಬ್ಬು ಕಟಾವಿಗೆ ವಲಸೆ ಬರುತ್ತಿದ್ದಾರೆ, ಬೇರೆ ರಾಜ್ಯಗಳಾದ ಮಹಾರಾಷ್ಟ್ರದಿಂದಲೂ ಕೂಲಿ ಕೆಲಸಕ್ಕೆಂದು ಬರುತ್ತಾರೆ, ಅಂತಹವರ ಮಕ್ಕಳ ರಕ್ಷಣೆಗೆ ನಾವು ಬದ್ಧರಾಗಿರಬೇಕು. ಕೆಲವು ಸಮಯದಲ್ಲಿ ಹಲವು ಘಟನೆಗಳು ನಡೆಯುತ್ತವೆ, ಅವುಗಳನ್ನು ತಪ್ಪಿಸಲು ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯವರು ಸೇರಿದಂತೆ ಸಂಘ ಸಂಸ್ಥೆಯವರು ಸಹಕರಿಸಬೇಕು ಎಂದು ಮನವಿ ಮಾಡಿದರು.ಜಿಲ್ಲೆಯ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿರುವ ವಲಸೆ ಮಕ್ಕಳನ್ನು ಗುರುತಿಸಿ ಅವರಿಗೆ ಭದ್ರತೆ ನೀಡುವುದು ಮುಖ್ಯವಾಗಬೇಕಿದೆ, ಆರು ವರ್ಷದೊಳಗಿನ ಅಥವಾ ಇದಕ್ಕೂ ಮೇಲ್ಪಟ್ಟಂತಹ ಮಕ್ಕಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷಣ, ಸೌಲಭ್ಯ ನೀಡಬೇಕು. ಇದರ ಜೊತೆಗೆ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಲಸೆ ಮಕ್ಕಳ ಸುರಕ್ಷತೆಗೆ ಅಲ್ಲಿನ ಸ್ಥಳೀಯ ವ್ಯಾಪ್ತಿಯ ಗ್ರಾಪಂಗಳು ಕ್ರಮ ವಹಿಸಬೇಕು. ಇದರ ಬಗ್ಗೆ ಸರ್ಕಾರವು ಸಹ ತಿಳಿಸಿದೆ, ವಲಸೆ ಮಕ್ಕಳ ರಕ್ಷಣೆಗಾಗಿಯೇ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಜೊತೆಗೆ ಇದರ ಉದ್ದೇಶವನ್ನು ತಿಳಿದುಕೊಂಡು ಮಕ್ಕಳ ರಕ್ಷಣೆ ಮಾಡಬೇಕು. ಒಟ್ಟಾರೆಯಾಗಿ ವಲಸೆ ಕುಟುಂಬಗಳ ಮೇಲೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದಿದೆ, ಅದನ್ನು ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಇದರಿಂದ ಬಾಲ್ಯ ವಿವಾಹ ನಡೆಯುವ ಮೊದಲೇ ತಡೆಯಲು ಸಾಧ್ಯವಾಗುತ್ತದೆ. ಯಾರೇ ಮಾಹಿತಿ ನೀಡಿದರು ಅದನ್ನು ಗೌಪ್ಯವಾಗಿ ಇಡಲಾಗುವುದು. ಬಾಲ್ಯ ವಿವಾಹದ ಬಗ್ಗೆ ಜಾತ್ರೆ, ಸಭೆ ಸಮಾರಂಭಗಳಲ್ಲಿ ಅರಿವು ಮೂಡಿಸುವುದು ಅಧಿಕಾರಿಗಳಿಗೆ ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಂಡ್ಯ ತಾಲೂಕಿನ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒಗಳು ವಲಸೆ ಮಕ್ಕಳ ರಕ್ಷಣೆ ಕುರಿತ ಸಭೆಯಲ್ಲಿ ಭಾಗವಹಿಸಿದ್ದರು.ತಹಸೀಲ್ದಾರ್ ಶಿವಕುಮಾರ ಬಿರಾದರ, ಬಿಇಒ ಮಹದೇವ, ತಾಲೂಕು ಅರೋಗ್ಯ ಅಧಿಕಾರಿ ಜವರೇಗೌಡ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಎಂ.ಕೆ.ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.