ಗ್ರಾಮೀಣ ಕ್ರೀಡೆಗಳ ರಕ್ಷಣೆಗೆ ಮುಂದಾಗಿ

KannadaprabhaNewsNetwork |  
Published : Jan 05, 2025, 01:35 AM IST
ತಾಳಿಕೋಟೆ 1 | Kannada Prabha

ಸಾರಾಂಶ

ವಿದೇಶಿ ಕ್ರೀಡೆಗಳ ಭರಾಟೆಯಲ್ಲಿ ಜಾನಪದ ಸೊಗಡಿನ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿರುವ ಗ್ರಾಮೀಣ ಕ್ರೀಡೆಗಳ ರಕ್ಷಣೆಗೆ ಯುವ ಸಮೂಹ ಮುಂದಾಗಬೇಕಿದೆ ಎಂದು ಅಸ್ಕಿ ಫೌಂಡೇಶನ್‌ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ವಿದೇಶಿ ಕ್ರೀಡೆಗಳ ಭರಾಟೆಯಲ್ಲಿ ಜಾನಪದ ಸೊಗಡಿನ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿರುವ ಗ್ರಾಮೀಣ ಕ್ರೀಡೆಗಳ ರಕ್ಷಣೆಗೆ ಯುವ ಸಮೂಹ ಮುಂದಾಗಬೇಕಿದೆ ಎಂದು ಅಸ್ಕಿ ಫೌಂಡೇಶನ್‌ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.

ತಾಲೂಕಿನ ಮೂಕೀಹಾಳ ಗ್ರಾಮದ ಹಜರತ್ ಅಲ್ಲಾವುದ್ದೀನ್‌ ಅನ್ಸಾರಿ ಉರ್ಫ ಲಾಡ್ಲೇಮಶ್ಯಾಕ ದರ್ಗಾ ಉರುಸಿನ(ಜಾತ್ರೆ) ಅಂಗವಾಗಿ ಶನಿವಾರ ಏರ್ಪಡಿಸಲಾದ ರಾಜ್ಯಮಟ್ಟದ ಕಬ್ಬಡ್ಡಿ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಯುವ ಸಮೂಹ ಕ್ರಿಕೆಟ್‌ಗೆ ಮತ್ತು ಮೊಬೈಲ್‌ಗೆ ನೀಡುತ್ತಿರುವ ಪ್ರಾಧಾನ್ಯತೆ ದೇಶಿಯ ಸೊಗಡಿನ ಕಬಡ್ಡಿ, ಖೋಖೋ ಕ್ರೀಡೆಗಳಿಗೆ ನೀಡುತ್ತಿಲ್ಲ. ಪರಿಣಾಮ ಗ್ರಾಮೀಣ ಪ್ರದೇಶದ ಕ್ರೀಡೆಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಇಂತಹ ಕ್ರೀಡೆಗಳಿಗೆ ಸೂಕ್ತ ಉತ್ತೇಜನ ದೊರಕಿಸುವಲ್ಲಿ ಮೂಕೀಹಾಳ ಗ್ರಾಮದ ಲಾಡ್ಲೇಮಶ್ಯಾಕ ದರ್ಗಾ ಕಮಿಟಿ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು.ಸಮಾಜ ಸೇವಕ ಯುವ ಮುಖಂಡ ವೀರೇಶಗೌಡ ಬಾಗೇವಾಡಿ(ಮಿಣಜಗಿ) ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ಶಿಸ್ತು, ಶ್ರದ್ಧೆ, ಕಾಯಕ ಪ್ರಜ್ಞೆ ಕಣ್ಮರೆಯಾಗಿದೆ. ದುಶ್ಚಟಗಳಿಗೆ ಅಂಟಿಕೊಂಡಿರುವ ಯುವಕರು ಅಮೂಲ್ಯ ಜೀವನವನ್ನು ನಾಶ ಪಡಿಸಿಕೊಳ್ಳುತ್ತಿದ್ದಾರೆ. ಸತ್ ಚಿಂತನೆ, ಮಾನವೀಯ ಮೌಲ್ಯಗಳ ಮೂಲಕ ಯುವಕರನ್ನು ಮತ್ತೆ ಸರಿದಾರಿಗೆ ತರುವ ಕೆಲಸ ಜವಾಬ್ದಾರಿಯಿಂದ ನಡೆಯಬೇಕಿದೆ. ಇಂದು ಮೂಕೀಹಾಳ ಗ್ರಾಮದ ಲಾಡ್ಲೇಮಶ್ಯಾಕ ದರ್ಗಾದ ಜಾತ್ರೋತ್ಸವ ಅಂಗವಾಗಿ ನಡೆಯುತ್ತಿರುವ ರಾಜ್ಯಮಟ್ಟದ ಕಬ್ಬಡ್ಡಿ ಕ್ರೀಡಾಕೂಟವು ಯಶಸ್ವಿದಾಯವಾಗಿ ಜರುಗಲಿದೆ. ನಿರ್ಣಾಯಕ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವಿಗೆ ಮಹತ್ವ ನೀಡದೇ ಫಲಿತಾಂಶವನ್ನು ಕ್ರೀಡಾ ಮನೋಭಾವದೊಂದಿಗೆ ಸ್ವೀಕರಿಸಬೇಕು ಎಂದು ತಿಳಿಸಿದರು.ಯುವ ಮುಖಂಡ ಶಿವರಾಜ ಗುಂಡಕನಾಳ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಕ್ರೀಡಾಮನೋಭಾವನೆ ಎಂಬುವುದು ಕುಗ್ಗುತ್ತಿರುವುದು ನೋವಿನ ಸಂಗತಿಯಾಗಿದೆ. ಗ್ರಾಮೀಣ ಕ್ರೀಡೆಗಳಾಗಿರುವ ಕಬ್ಬಡ್ಡಿ, ಕುಸ್ತಿ, ಭಾರ ಎತ್ತುವ ಸ್ಪರ್ಧೆಯೊಳಗೊಂಡು ಅನೇಕ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಇಂದಿನ ಮೊಬೈಲ್ ಹುಚ್ಚಿಗೆ ಬಿದ್ದಿರುವ ಯುವ ಸಮೂಹ ದಾರಿ ತಪ್ಪುತ್ತಿದೆ ಎಂಬ ಆಂತಕವೂ ಕಾಡುತ್ತಿದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದರೊಂದಿಗೆ ಉತ್ತಮ ಆರೋಗ್ಯವಂತರಾಗಿ ಬಾಳಬೇಕು. ಮೂಕೀಹಾಳ ದರ್ಗಾದ ಜಾತ್ರೆಯ ಅಂಗವಾಗಿ ನಮ್ಮ ದೇಶದ ಪ್ರತಿಭಿಂಬವಂತಿರುವ ಗ್ರಾಮೀಣ ಕ್ರೀಡೆ ಕಬ್ಬಡ್ಡಿ ಆಯೋಜನೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು.ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರಥಮವಾಗಿ ₹೫೧ ಸಾವಿರ ಅಸ್ಕಿ ಫೌಂಡೇಶನ್ ವತಿಯಿಂದ ಸಿ.ಬಿ.ಅಸ್ಕಿ ಅವರು ಘೋಷಿಸಿದರು. ದ್ವಿತೀಯ ಭಹುಮಾನವಾಗಿ ಸಮಾಜ ಸೇವಕ ವೀರೇಶಗೌಡ ಬಾಗೇವಾಡಿ ಅವರು ₹೩೧ ಸಾವಿರ, ತೃತೀಯ ಭಹುಮಾನವಾಗಿ ಗುತ್ತಿಗೆದಾರ ಎಚ್.ಎಂ.ನಾಯಕ ಅವರು ₹೨೧ ಸಾವಿರ, ನಾಲ್ಕನೇ ಬಹುಮಾನವಾಗಿ ಅವಟಿ ಸರ್ ಗೆಳೆಯರ ಬಳಗದ ವತಿಯಿಂದ ₹೧೦ ಸಾವಿರ ಘೋಷಿಸಲಾಯಿತು. ಕಬ್ಬಡ್ಡಿ ಕ್ರೀಡಾಕೂಟಕ್ಕೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಟಾಸ್ ಮಾಡುವ ಮೂಲಕ ಚಾಲನೆ ನೀಡಿದರು.ಈ ಸಮಯದಲ್ಲಿ ಲಾಡ್ಲೇಮಶ್ಯಾಕ ದರ್ಗಾ ಕಮಿಟಿ ಅಧ್ಯಕ್ಷ ಕೆ.ಎಚ್.ಪಾಟೀಲಪಟೇಲ, ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಎಂ.ನಾಯಕ, ಹುಮಾಯುನ್ ಪಟೇಲಬಿರಾದಾರ, ರಿಯಾಜ ಪಟೇಲ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ರಾಜು ಗಣಾಚಾರಿ ನಿರೂಪಿಸಿ, ವಂದಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದ ವಾತಾವರಣ ನೆಲೆಯೂರಬೇಕಿದ್ದು, ಯುವಕರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕಿದೆ. ತಾಲೂಕಿನಲ್ಲಿಯೇ ಮೂಕೀಹಾಳ ದರ್ಗಾ ಜಾತ್ರೆಯು ಪ್ರಸಿದ್ಧತೆ ಪಡೆದುಕೊಂಡಿದೆ. ಯುವ ಸಮೂಹವು ದುಶ್ಚಟಗಳಿಂದ ದೂರ ಉಳಿದು ಉತ್ತಮ ಆರೋಗ್ಯವಂತರಾಗಿ ಬಾಳಬೇಕಿದೆ ಮತ್ತು ಕ್ರೀಡಾ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಂಡು ಸಾಗಬೇಕು.

-ಸಿ.ಬಿ.ಅಸ್ಕಿ,

ಅಸ್ಕಿ ಫೌಂಡೇಶನ್‌ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ