ವಿಶೇಷ ವರದಿ
ಬರದ ಬೇಗೆಯ ನಡುವೆಯೂ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ತುಂಗೆ ಭರ್ಜರಿ ಪ್ರವೇಶ ಕೊಟ್ಟಿದ್ದಾಳೆ. ಭದ್ರಾ ಬರುವುದಕ್ಕೂ ಮೊದಲೇ ಹಾಜರಿ ಹಾಕಿರುವ ತುಂಗೆ ಭರಮಣ್ಣನಾಯಕನ ಕೆರೆಯಲ್ಲಿ ದುಮ್ಮಿಕ್ಕುವುದರ ಮೂಲಕ ಭವಿಷ್ಯದಲ್ಲಿ ತನ್ನೊಡಲ ಮಕ್ಕಳ ಸಾಕುವ ಭರವಸೆ ನೀಡಿದ್ದಾಳೆ.
ಮುಂಗಾರು ಕೊರತೆಯಿಂದ ಕೃಷಿಕರು ಮುಗಿಲಿಗೆ ಮುಖಮಾಡಿ ಮಳೆಯ ಆಗಮನಕ್ಕಾಗಿ ಕಾಯುತ್ತಿರುವಾಗಲೆ ದೂರದಿಂದ ಹರಿದು ಬಂದ ತುಂಗೆಯ ರಸಗಂಗೆ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯನಕೆರೆಗೆ ಪಾದಾರ್ಪಣೆ ಮಾಡಿ ಎಲ್ಲರ ಮೊಗದಲ್ಲಿ ಸಂಭ್ರಮದ ಸಿಂಚನ ಮೂಡಿಸಿದ್ದಾಳೆ.ಭರಮಸಾಗರದಲ್ಲಿ ದೊಡ್ಡಕೆರೆ ಎಂದೇ ಖ್ಯಾತವಾಗಿರುವ ಇದು 1000 ಎಕರೆ ಭೂಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಬತ್ತಿ ಹೋಗಿದ್ದ ಈ ಕೆರೆಗೆ ನೀರು ತರುವಲ್ಲಿ ಸರ್ಕಾರದೊಂದಿಗೆ ಹೋರಾಟ ಮಾಡಿ ಜಲಗಂಗೆಯನ್ನು ಹೊತ್ತು ತಂದವರು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರ ದೂರದೃಷ್ಟಿಯ ಯೋಜನೆಯಿಂದ ಭರಮಸಾಗರ ಹೋಬಳಿ ವ್ಯಾಪ್ತಿಯ ಭೂಪ್ರದೇಶ ಹಸುರಿನ ಹೊನ್ನಗರಿಯಂತಾದುದು ಇತಿಹಾಸವೇ ಸರಿ.
ಆರಿದ್ರಾ ಮಳೆ ರೈತರಿಗೆ ಭಾಷೆ ಕೊಟ್ಟ ಮಳೆ. ಅದೂ ತನ್ನ ಇರುವು ತೋರಿಸದೇ ಇದ್ದಾಗ ಇನ್ನೇನು ಈ ವರ್ಷ ಬರವೇ ಗತಿ ಎಂದು ಭಾವಿಸಿದ್ದರು ಕೃಷಿಕರು. ಮಲೆನಾಡ ಭಾಗದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತುಂಬಿದ ತುಂಗೆ ಅಣೆಕಟ್ಟೆಯಿಂದ ಹರಿದು ಬಂದ ನೀರು ಹರಿಹರ ಸಮೀಪದ ದೀಟೂರು ತಲುಪುತ್ತಲೆ ಭರಮಸಾಗರ ಏತ ನೀರಾವರಿ ಯೋಜನೆಯ ತಂಡ ಕಾರ್ಯಪ್ರವೃತ್ತವಾದ ಕಾರಣ ನೀರು ಸರಾಗವಾಗಿ ಬರುವಂತಾಗಿದೆ.
ಕೆರೆಗೆ ನೀರು ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೃಷಿಕರು ಕೆರೆ ಏರಿಗೆ ಧಾವಿಸಿ ನೀರು ಬರುವ ದೃಶ್ಯವನ್ನು ನೋಡಿ ಸಂತಸಪಟ್ಟಿದ್ದಾರೆ. ವಾಹನ ಸವಾರರು ಹರಿದು ಬಂದ ಗಂಗೆಗೆ ಮನದಲ್ಲಿಯೇ ನಮನ ಸಲ್ಲಿಸಿದ್ದಾರೆ. ಮೂರು ತಿಂಗಳ ಕಾಲ ನದಿ ತೀರದಿಂದ ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗೆ ನೀರು ತುಂಬಿಸಬಹುದಾಗಿದ್ದು, ಈ ಹಂಗಾಮಿನಲ್ಲಿ ಸಮಿತಿ ಕಾರ್ಯೋನ್ಮುಖವಾದರೆ ಬರುವ ಬೇಸಿಗೆಯನ್ನು ಎದುರಿಸಬಹುದಾಗಿದೆ.