ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 260 ಮತಗಟ್ಟೆಗಳಲ್ಲಿ 2,16,554 ಮಂದಿ ಮತದಾರರು ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 1734 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಹಸೀಲ್ದಾರ್ ನಯೀಂಉನ್ನೀಸಾ ತಿಳಿಸಿದರು.ವಿಧಾನಸಭಾ ಕ್ಷೇತ್ರದ ಒಟ್ಟು 260 ಮತ ಕೇಂದ್ರಗಳ ಪೈಕಿ 146 ಕೇಂದ್ರಗಳನ್ನು ಸೂಕ್ಷ್ಮ ಮತಗಟ್ಟೆ ಹಾಗೂ 4 ಅತಿ ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ. ಇನ್ನುಳಿದ ಎಲ್ಲಾ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದರು.
ಎಲ್ಲ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಪ್ರತಿ ಮತಕೇಂದ್ರಕ್ಕೆ ಆರು ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಮತದಾನದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಚುನಾವಣಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಲ್ಲ ಸಿಬ್ಬಂದಿಗೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ.ಮಸ್ಟರಿಂಗ್ ತರಬೇತಿ ನೀಡಿದ ಬಳಿಕ 38 ಸಾರಿಗೆ ಬಸ್, 10 ಮ್ಯಾಕ್ಸಿಕ್ಯಾಬ್‌ಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ, ವಿವಿ ಪ್ಯಾಟ್‌ಗಳೊಂದಿಗೆ ಅಗತ್ಯ ಪರಿಕರಗಳನ್ನು ಚುನಾವಣಾ ಸಿಬ್ಬಂದಿಗೆ ಕೊಟ್ಟು ಕಳುಹಿಸಲಾಯಿತು.
ಕ್ಷೇತ್ರದಲ್ಲಿ 1,07,760 ಮಂದಿ ಪುರುಷರು, 1,08,783ಮಂದಿ ಮಹಿಳೆಯರು ಹಾಗೂ 11 ಮಂದಿ ಇತರೆ ಸೇರಿ ಒಟ್ಟು 2,16,554 ಮಂದಿ ಮತದಾರರು ಮತಚಲಾಯಿಸುವ ಹಕ್ಕುಹೊಂದಿದ್ದಾರೆ.ಪೊಲೀಸ್ ಸಿಬ್ಬಂದಿ:
ಕ್ಷೇತ್ರದಾದ್ಯಂತ ಮುಕ್ತ, ನ್ಯಾಯ ಮತ್ತು ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ 1 ಡಿವೈಎಸ್‌ಪಿ, 4 ಸಿಪಿಐ, 10 ಪಿಎಸ್‌ಐ, ಸೇರಿ ಒಟ್ಟು 800 ಮಂದಿ ಪೊಲೀಸ್ ಮತ್ತು ಗೃಹರಕ್ಷಕದಳದ ಸಿಬ್ಬಂದಿಗಳ ಜೊತೆಗೆ 2 ಕೆಎಸ್‌ಆರ್‌ಪಿ ತುಕಡಿ ಹಾಗೂ ಗುಜರಾತ್ ಪೊಲೀಸರನ್ನು ನಿಯೋಜಿಸಲಾಗಿದೆ.ಡೀಸಿ ಭೇಟಿ ಪರಿಶೀಲನೆ:
ಡಿ.ಮಸ್ಟರಿಂಗ್ ತರಬೇತಿ ನಡೆಯುತ್ತಿದ್ದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಗುರುವಾರ ಮಧ್ಯಾಹ್ನ ಭೇಟಿಕೊಟ್ಟು ಪರಿಶೀಲನೆ ನಡೆಸಿ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಮತದಾನ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ತಹಸೀಲ್ದಾರ್ ನಯೀಂ ಉನ್ನೀಸಾ, ಸಹಾಯಕ ಚುನಾವಣಾಧಿಕಾರಿ ಕೃಷ್ಣಕುಮಾರ್, ತಾಪಂ ಇಓ ಚಂದ್ರಮೌಳಿ, ಡಿವೈಎಸ್‌ಪಿ ಡಾ.ಎ.ಆರ್.ಸುಮಿತ್, ಸಿಪಿಐ ಬಿ.ಆರ್.ಗೌಡ ಸೇರಿದಂತೆ ಸೆಕ್ಟರ್ ಅಧಿಕಾರಿಗಳು ಇದ್ದರು.