ಕೊಡವೂರಿನಲ್ಲಿ ಇತ್ತೀಚೆಗೆ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ಸಮಾರಂಭ ನಡೆಯಿತು. ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಅತಿಥಿಯಾಗಿ ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸಮಸ್ತ ಕನ್ನಡಿಗರಲ್ಲಿ ಅನೂಚಾನವಾಗಿರುವ ಕರ್ನಾಟಕ ಸಂಸ್ಕೃತಿಯನ್ನು ಬದಲಾಗಿರುವ ಸಂಸ್ಕೃತಿಗೆ ಹೊಂದಿಕೊಂಡು ಬದುಕಿಗೆ ಆರ್ಥಿಕವಾಗಿ ಲಾಭದಾಯಕವಾಗುವಂತೆ ಪರಿವರ್ತಿಸಿ ಕರ್ನಾಟಕ ಸಂಸ್ಕೃತಿ ವೈಭವವನ್ನು ಪುನರುತ್ಥಾನಗೊಳಿಸಬೇಕೆಂದು ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಕರೆ ನೀಡಿದರು.
ಉಡುಪಿ ಸಮೀಪದ ಕೊಡವೂರಿನಲ್ಲಿ ಇತ್ತೀಚೆಗೆ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನು ಮನದಟ್ಟು ಮಾಡಿಕೊಂಡು ಕನ್ನಡತನದ ಕುರಿತು ಕೀಳರಿಮೆ ತೊರೆದು ಯುವಜನಾಂಗ ದೇಶದ ಪ್ರಗತಿಗೆ ಸಂಸ್ಕೃತಿ ಸಾಮರಸ್ಯದೊಂದಿಗೆ ಸೇವೆ ಸಲ್ಲಿಸಬೇಕು. ಅಲ್ಲದೆ ಮುಂದಿನ ಜನಾಂಗಕ್ಕೂ ಕನ್ನಡ ವೈಭವವನ್ನು ವರ್ಗಾಯಿಸಿ ವಿಶ್ವದಲ್ಲೆ ಅಗ್ರಸ್ಥಾನ ಗಳಿಸಬೇಕೆಂದು ಸಾಮಗ ಅವರು ಹೇಳಿದರು.
ಕರ್ನಾಟಕ ಸಂಸ್ಕೃತಿಗೆ ಅದ್ಭುತ ಶಕ್ತಿಯಿರುವುದರಿಂದ ದೆಹಲಿ ಕನ್ನಡಿಗ ಪತ್ರಿಕೆ ದಿಲ್ಲಿಯಲ್ಲಿ ೩೧ ರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನೂ, ಕನ್ಯಾಕುಮಾರಿ, ಪಣಜಿ, ಕೊಲ್ಕತ್ತಾ, ಬರೊಡಾ, ಭೋಪಾಲ್, ಹೈದರಾಬಾದ್, ಚೆನ್ನೈ, ಕಾಠ್ಮಾಂಡು, ಪುದುಚೇರಿ, ಮುಂಬೈನಲ್ಲಿ ಒಟ್ಟು ೧೦ ಅಖಿಲ ಭಾರತ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳಗಳನ್ನು ಯಶಸ್ವಿಯಾಗಿ ನಡೆಸಿದೆಯೆಂದು ತಿಳಿಸಿದರು.
ಸಾಹಿತಿ ಕೃಷ್ಣ ಆಚಾರ್ಯ ಸಮಾರಂಭ ಉದ್ಘಾಟಿಸಿದರು. ವಿದ್ವಾಂಸ ಗುರುರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ಉಪಾದ್ಯ ಸ್ವಾಗತಿಸಿದರು. ಪ್ರವೀಣ್ ಬಲ್ಲಾಳ್ ಪ್ರಸ್ತಾವನೆ ಮಾಡಿದರು. ಚಂದ್ರಶೇಖರ ರಾವ್ ವಂದಿಸಿದರು. ರೋಹಿಣಿ ಬಾಯರಿ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.