ಕೊಪ್ಪಳ:ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳು ಬೆಳಕಿಗೆ ಬರಬೇಕು ಎಂದು ಭಾರತೀಯ ಪೆಂಕಾಕ್ ಸೀಲಾತ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಕರೆ ನೀಡಿದರು.
ಕ್ರೀಡಾ ಕ್ಷೇತ್ರದಲ್ಲಿ ಇಂದು ಬಹಳಷ್ಟು ಸ್ಪರ್ಧೆ ಇದೆ. ಆದರೆ ಪೆಂಕಾಕ್ ಸೀಲಾತ್ ಕ್ರೀಡೆಯಲ್ಲಿ ಸ್ಪರ್ಧೆ ಕಡಿಮೆ ಇದೆ. ಸ್ವಲ್ಪ ಚೆನ್ನಾಗಿ ಆಟ ಆಡಿದರೆ ಖಂಡಿತ ಬಹುಮಾನ ಪಡೆಯುತ್ತೀರಿ. ಸರ್ಕಾರದಿಂದ ಕ್ರೀಡೆಗಳಿಗೆ ಬರುವ ಅನುದಾನ ಸದುಪಯೋಗ ಮಾಡಿಕೊಂಡು ಕ್ರೀಡೆಗಳ ಮೂಲಕ ಬೆಳಕಿಗೆ ಬನ್ನಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಧರ್ಮ ಬೆಳೆಯಬೇಕು. ಗೆಲುವು, ಸೋಲು ಮುಖ್ಯವಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತ ಮತ್ತು ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಮತ್ತು ದೈಹಿಕ ಶಿಕ್ಷಣ ಬೋಧಕ ಪ್ರದೀಪಕುಮಾರ ಮಾತನಾಡಿ, ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡೆ ಉಳಿಸಿ ಬೆಳೆಸಬೇಕು. ಸರ್ಕಾರಿ ಹುದ್ದೆಗಳಲ್ಲಿ ಕ್ರೀಡಾ ಮೀಸಲಾತಿ ಇದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಕ್ರೀಡೆ ನಮ್ಮನ್ನು ಮಾನಸಿಕ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿಸುತ್ತವೆ ಎಂದು ಹೇಳಿದರು.
ಬಿ.ಜಿ ಕರಿಗಾರ, ವಿಠ್ಠಲ ಬಿ.ಜಾಬಗೌಡರ್, ಎ. ಬಸವರಾಜ, ಮಂಜುನಾಥ್ ಅರೇಂಟುನೂರು, ಗವಿಸಿದ್ದಪ್ಪ ಮುತ್ತಾಳ, ಮಂಜುನಾಥ್ ಗೊಂಡಬಾಳ, ವಿನೋದ, ವಿಶ್ವನಾಥ್ ನಡುಕಟ್ಟಿ, ಶುಭ, ಸುಮಿತ್ರಾ ಹಾಗೂ ಸುಮಯ್ಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಹುಲಿಗೆಮ್ಮ ನಿರೂಪಿಸಿದರು. ಡಾ.ನರಸಿಂಹ ಸ್ವಾಗತಿಸಿ ವಂದಿಸಿದರು.