ಕನ್ನಡಪ್ರಭ ವಾರ್ತೆ ಶಿರಸಿಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕೆಂದು ಕೂಗು ಬಹುಕಾಲದಿಂದ ಕೇಳಿಬರುತ್ತಿದೆ. ಶುಕ್ರವಾರ ಬಜೆಟ್ ಮಂಡನೆಯಾಗುತ್ತಿದ್ದು, ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗಬಹುದು ಎಂದು ಶಿರಸಿ ಹಾಗೂ ಸುತ್ತಮುತ್ತಲಿನ ಜನತೆಗೆ ಭಾರಿ ನಿರೀಕ್ಷೆ ಹೊಂದಿದ್ದಾರೆ.ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದಲ್ಲಿ ಈ ಭಾಗದ ಜನತೆಗೆ ಆಸ್ಪತ್ರೆಗೆ ಸಂಬಂಧಿಸಿದ ಪ್ರತಿಯೊಂದು ವಿಷಯಕ್ಕೂ 125 ಕಿಮೀ ದೂರದ ಕಾರವಾರಕ್ಕೆ ಅಲೆದಾಟ ತಪ್ಪಲಿದೆ. ಎಲ್ಲಾ ವೈದ್ಯಕೀಯ ದಾಖಲೆ ಪತ್ರ ಶಿರಸಿಯಲ್ಲಿಯೇ ಲಭ್ಯವಾಗಲಿದೆ. ಜೊತೆಗೆ ಸಮಯ, ಹಣ ಉಳಿತಾಯ ಆಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ಚಿಕಿತ್ಸೆ ಲಭಿಸುವುದರಿಂದ ಜೀವ ಉಳಿಸಲು ಸಾಧ್ಯವಾಗಲಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಹೋರಾಟ ನಡೆದಾಗ ಅಂದಿನ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಂಡು, ಕಟ್ಟಡ ಹಾಗೂ ವೈದ್ಯಕೀಯ ಉಪಕರಣಗಳಿಗೆ ₹140 ಕೋಟಿ ಮಂಜೂರು ಮಾಡಿಸಿದ್ದರು.
ಅದರ ಪ್ರತಿಫಲವಾಗಿ ಕಟ್ಟಡ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡು ಸುಣ್ಣ ಬಣ್ಣ ಬಡಿದು ಉಧ್ಘಾಟನೆಯ ಹಂತಕ್ಕೆ ಬಂದು ನಿಂತಿದೆ. ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಪರಿವರ್ತಿಸಲು ಶಾಸಕ ಭೀಮಣ್ಣ ನಾಯ್ಕ ಮತ್ತು ಆರೋಗ್ಯ ಸಚಿವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ.ಆದರೆ ಕೇವಲ ಕಟ್ಟಡ ಕಾಮಗಾರಿ ಆದರೆ ಸಾಲದು. ತಜ್ಞ ವೈದ್ಯರುಗಳು ಬೇಕು. ಸಿಬ್ಬಂದಿ ಬೇಕು. ಅಗತ್ಯ ಯಂತ್ರೋಪಕರಣಗಳು ಬೇಕು. ಚಿಕಿತ್ಸೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳೂ ಬೇಕು. ಈ ದಿಸೆಯಲ್ಲಿ ಸರ್ಕಾರದಿಂದ ಆದೇಶವಾದಲ್ಲಿ ಮಾತ್ರ ಬಹುಕಾಲದ ನಿರೀಕ್ಷೆ ಈಡೇರಲಿದೆ.ಜಿಲ್ಲಾಸ್ಪತ್ರೆ ಶಿರಸಿಯಲ್ಲಿ ಆರಂಭವಾಗುವುದಿಂದ ಶಿರಸಿ, ಕುಮಟಾ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ, ಹಾಗೂ ಹಾವೇರಿ ಜಿಲ್ಲೆಯ ಹಾನಗಲ್, ಶಿವಮೊಗ್ಗ ಜಿಲ್ಲೆಯ ಸೊರಬ, ಮುಂತಾದ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಶಿರಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 250 ಹಾಸಿಗೆ ಸಾಮರ್ಥ್ಯದ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮಾಡಿ ಹೆಚ್ಚಿನ ವೈದ್ಯಕೀಯ ಸೇವೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಜಿಲ್ಲೆಯ ಪ್ರವಾಸದ ವೇಳೆ ಈ ಹಿಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.ಶಿರಸಿ ಪಂಡಿತ್ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಈ ಪ್ರದೇಶದ ಜನರು ಉಪಯೋಗವನ್ನು ಪಡೆದು ಕೊಳ್ಳಬಹುದು. ಆದರೆ ಜಿಲ್ಲಾ ಆಸ್ಪತ್ರೆಗೆ ಬೇಕಾದ ನುರಿತ ವೈದ್ಯರು, ಸಿಬ್ಬಂದಿ ಮತ್ತು ಯಂತ್ರೋಪಕರಣಗಳು ಬರಬೇಕಾಗಲಿದೆ. ಅಂತಹ ಯಾವುದೇ ಆದೇಶ ಇದುವರೆಗೂ ಬಂದಿಲ್ಲ ಎನ್ನುತ್ತಾರೆ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನೇತ್ರಾವತಿ ಶಿರ್ಶಿಕರ.