ಬಿ.ಎಚ್.ಎಂ.ಗುರುಶಾಂತ ಶಾಸ್ತ್ರಿ
ಕಂಪ್ಲಿ, ರಾಯಚೂರು ಗ್ರಾಮೀಣ ಭಾಗದಲ್ಲಿ ಜಿಟಿಟಿಸಿ ಕಾಲೇಜು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೆಕೆಆರ್‌ಡಿಬಿ ಮೈಕ್ರೋ ಅನುದಾನದಡಿ ತಲಾ ₹73.75 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 2025ರ ಸೆಪ್ಟೆಂಬರ್ 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆದರೆ, ನಿರ್ಣಯದ ನಂತರವೂ ಕಾಮಗಾರಿ ಆರಂಭವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಟಿಟಿಸಿ ಕಾಲೇಜು ಸ್ಥಾಪನೆಯಾಗುವುದರಿಂದ ಈ ಭಾಗದ ಯುವಕರಿಗೆ ಉತ್ತಮ ತಾಂತ್ರಿಕ ತರಬೇತಿ ಹಾಗೂ ಉದ್ಯೋಗಾವಕಾಶಗಳ ದಾರಿ ತೆರೆಯಲಿದೆ ಎಂಬ ನಿರೀಕ್ಷೆ ಮೂಡಿತ್ತು. ನಾಲ್ಕು ವರ್ಷದ ಪ್ರಮುಖ ಕೋರ್ಸ್‌ಗಳೊಂದಿಗೆ ಈ ಕಾಲೇಜು ಕಾರ್ಯ ನಿರ್ವಹಿಸಲಿದ್ದು, ಮೊದಲ ಮೂರು ವರ್ಷ ತಾಂತ್ರಿಕ ತರಬೇತಿ ಹಾಗೂ ಒಂದು ವರ್ಷ ಕೈಗಾರಿಕಾ ಸಂಸ್ಥೆಗಳಲ್ಲಿ ಇಂಪ್ಲಾಂಟ್ ಟ್ರೈನಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ ಕಲ್ಪಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.ಇದರ ಜೊತೆಗೆ 2ರಿಂದ 6 ತಿಂಗಳ ಅವಧಿಯ ಶಾರ್ಟ್ ಟರ್ಮ್ ಕೋರ್ಸ್‌ಗಳೂ ಇರಲಿದ್ದು, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವೀಧರರು ಈ ತರಬೇತಿಗೆ ಸೇರ್ಪಡೆಯಾಗಬಹುದಾಗಿದೆ. ಮತ್ತೊಂದು ವಿಶೇಷವಾಗಿ ಒಂದು ವರ್ಷದ “ಟೂಲ್ ರೂಮ್ ಮಿಶಿನಿಷ್ಟ್ ಸರ್ಟಿಫಿಕೇಟ್ ಪ್ರೋಗ್ರಾಮ್” ಕೂಡ ನಡೆಸಲಾಗುತ್ತದೆ. ಈ ತರಬೇತಿಗಳ ಮೂಲಕ ಯುವಕರಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಸ್ವ ಉದ್ಯೋಗದ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿದೆ.
ಆದರೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದರೂ ಕಾಲೇಜು ನಿರ್ಮಾಣ ಕಾಮಗಾರಿ ಆರಂಭವಾಗದೇ ಇರುವುದರಿಂದ ಯುವಕರ ಕನಸುಗಳು ಸಾಕಾರವಾಗುವ ದಾರಿ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ. ಇದರಿಂದಾಗಿ ಸರ್ಕಾರದ ಘೋಷಣೆ ಕೇವಲ ಕಾಗದದ ಮೇಲಿನ ಯೋಜನೆಯಾಗಿ ಉಳಿಯುವ ಭೀತಿ ವ್ಯಕ್ತವಾಗುತ್ತಿದೆ.
ಕಂಪ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಜಿಟಿಟಿಸಿ ಕಾಲೇಜು ಸ್ಥಾಪನೆ ಮಹತ್ವದ ಹೆಜ್ಜೆಯಾಗಿದೆ. ಇದಕ್ಕಾಗಿ ಅರಳಿಹಳ್ಳಿ ತಾಂಡಾ ಪ್ರದೇಶದಲ್ಲಿ ಸುಮಾರು 6 ಎಕರೆ ಭೂಮಿ ಮಂಜೂರಾಗಿದೆ. ಕಾಲೇಜು ಕಟ್ಟಡ ನಿರ್ಮಾಣದ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎನ್ನುತ್ತಾರೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ.