ಧಾರವಾಡ:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂದಿನ ಜೂನ್ ವರೆಗೆ ಬರಗಾಲ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವಿಶೇಷವಾಗಿ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ಸಚಿವ ಸಂತೋಷ ಲಾಡ್ ಹೇಳಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಅತಿವೃಷ್ಟಿ, ಬರ ಪರಿಸ್ಥಿತಿ ಕುರಿತು ಚರ್ಚಿಸಿದ ಅವರು, ಮೂರು ದಿನ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರುಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಬೆಳೆ ಸಮೀಕ್ಷೆ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ವೆ ನಂಬರ್‌ಗಳ ಮೂಲಕ ಸರ್ವೆ ಕಾರ್ಯ ನಡೆಯಲಿದೆ ಎಂದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಆ. 5ರ ವರೆಗೆ ವಾಡಿಕೆ 299 ಮಿಮೀ ಮಳೆ ಪೈಕಿ ವಾಸ್ತವಿಕವಾಗಿ 196 ಮಿಮೀ ಮಳೆ (ಶೇ. 35ರಷ್ಟು ಕೊರತೆ) ಆಗಿದೆ. ಎಂಟು ತಾಲೂಕುಗಳ ಪೈಕಿ ಕುಂದಗೋಳ ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆ ಕೊರತೆಯಾಗಿದೆ. ಹವಾಮಾನ ಇಲಾಖೆ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂದಿನ ಐದು ದಿನ ಗ್ರೀನ್ ಅಲರ್ಟ್ ಘೋಷಿಸಿದ್ದು ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹೇಳಿದರು.ಮುಂಗಾರಿನಲ್ಲಿ ಶೇ.96ರಷ್ಟು ಬಿತ್ತನೆಯಾಗಿದ್ದು, ತೋಟಗಾರಿಕೆಯಲ್ಲಿ ಶೇ. 74ರಷ್ಟಾಗಿದೆ. ಜಿಲ್ಲೆಯ ರೈತರಿಗೆ ಅಗತ್ಯ ಬೀಜ ಹಾಗೂ ಗೊಬ್ಬರದ ವ್ಯವಸ್ಥೆ ಮಾಡಲಾಗಿದ್ದು, ಕೊರತೆ ಇಲ್ಲ. ಹಾಗೆಯೇ, 1,29,769 ರೈತರು ಬೆಳೆವಿಮೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ನೀಡಿದರು. ಇದರೊಂದಿಗೆ ಹು-ಧಾ ಅವಳಿ ನಗರ ಸೇರಿ ಜಿಲ್ಲೆಯ ಕುಡಿಯುವ ನೀರಿನ ವಾಸ್ತವ ಸ್ಥಿತಿ-ಗತಿ ಬಗ್ಗೆ ಸಚಿವರಿಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ ಇದ್ದರು.